ಹಾವೇರಿ :ಜಿಲ್ಲಾ ಪೊಲೀಸ್ 2022 ರ ಸಾಲಿನಲ್ಲಿ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ವಾರಸುದಾರರಿಗೆ ನೀಡುವ ಕಾರ್ಯಕ್ರಮ ನಗರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ವಾರಸುದಾರರಿಗೆ ಸ್ವತ್ತುಗಳನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ aವರು, 2022 ರಲ್ಲಿ 184 ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ 1 ಕೋಟಿ 77 ಲಕ್ಷ 86 ಸಾವಿರ ಎರಡುನೂರಾ 11 ರೂಪಾಯಿ ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ನೀಡುತ್ತಿರುವುದಾಗಿ ಮಾಹಿತಿ ನೀಡಿದರು.
ಹಾವೇರಿ ಜಿಲ್ಲೆಯಲ್ಲಿ 2022 ರಲ್ಲಿ ಒಟ್ಟು 479 ಕಳ್ಳತನ ಪ್ರಕರಣಗಳ ದಾಖಲಾಗಿದ್ದು, ಬರೋಬ್ಬರಿ 5 ಕೋಟಿ 17 ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿದ್ದವು. ಉಳಿದ ಪ್ರಕರಣಗಳಲ್ಲಿ ಆರೋಪಿಗಳು ಮತ್ತು ಸ್ವತ್ತುಗಳ ಪತ್ತೆ ಕಾರ್ಯ ನಿರಂತರವಾಗಿ ಮುಂದುವರಿದಿದೆ. ಆದಷ್ಟು ಬೇಗ ಆರೋಪಿಗಳ ಬಂಧಿಸುವ ಇಂಗಿತವನ್ನು ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ವ್ಯಕ್ತಪಡಿಸಿದರು.
ಯಾವ ಯಾವ ಪ್ರಕರಣಗಳು ಎಷ್ಟೆಷ್ಟು.. 184 ಪ್ರಕರಣಗಳಲ್ಲಿ 13 ಡಕಾಯಿತಿ, 6 ಸುಲಿಗೆ, 3 ಹಗಲು ಕನ್ನ, 36 ರಾತ್ರಿ ಕನ್ನ ಮತ್ತು 2 ಜಾನುವಾರು ಕಳವು ಪ್ರಕರಣ ಮತ್ತು 124 ಸಾಮಾನ್ಯ ಕಳ್ಳತನ ಪ್ರಕರಣಗಳು ಸೇರಿವೆ. ಹಾವೇರಿಯ ಪೊಲೀಸರು ಇದರಲ್ಲಿ 38 ಮೋಟಾರ ಬೈಕ್ ಕಳ್ಳತನ ಪತ್ತೆ ಹಚ್ಚಿದ್ದಾರೆ. ಟ್ರ್ಯಾಕ್ಟರ್, ಅಲ್ಯುಮಿನಿಯಂ ತಂತಿ, ಕುರಿ ಆಡು, ಮೊಬೈಲ್ ಫೋನ್, ಮೆಕ್ಕೆಜೋಳ, ಜೆಸಿಬಿ, ಅಡಕಿ, ಇಟ್ಟಂಗಿ ಮಷೀನ್, ಟಾಟಾ ಮ್ಯಾಜಿಕ ವಾಹನ, 54 ಅಕ್ರಮ ಮರಳು ಸಾಕಾಣಿಕೆ ಪ್ರಕರಣ ಸಹ ಸೇರಿವೆ ಎಂದು ಎಸ್ಪಿ ಹನುಮಂತರಾಯ ಅವರು ವಿವರಣೆ ನೀಡಿದರು.
ಇದನ್ನೂ ಓದಿ :ಸರಕು-ಸಾಗಾಣಿಕೆ ವಾಹನಗಳಲ್ಲಿ ಜನರ ಪ್ರಯಾಣ ನಿಷೇಧ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶ