ಹಾವೇರಿ: ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಐದು ದಶಕಗಳಿಂದ ಎದುರಾಳಿಯಾಗಿದ್ದು ಕಾಂಗ್ರೆಸ್‌ನ ಮನೋಹರ್ ತಹಶೀಲ್ದಾರ್ ಮತ್ತು ಮಾಜಿ ಸಚಿವ ದಿವಂಗತ ಸಿ ಎಂ ಉದಾಸಿ. 1983 ರಿಂದ ಆರಂಭವಾದ ಅವರ ಜುಗಲ್ಬಂದಿ ಕಳೆದ 2013 ರವರಗೆ ನಡೆದಿತ್ತು. ಮನೋಹರ್ ತಹಶೀಲ್ದಾರ್ 1978 ರಲ್ಲಿ ಸ್ಪರ್ಧೆಗೆ ಇಳಿದರೆ, 1983 ರಲ್ಲಿ ಸಿ ಎಂ. ಉದಾಸಿ ಕ್ಷೇತ್ರಕ್ಕೆ ಕಾಲಿಟ್ಟಿದ್ದರು.
2018 ರಲ್ಲಿ ಕಾಂಗ್ರೆಸ್ ಮನೋಹರ್ ತಹಶೀಲ್ದಾರ್ ಅವರನ್ನು ಬಿಟ್ಟು ಶ್ರೀನಿವಾಸ್ ಮಾನೆಯನ್ನ ಕಣಕ್ಕಿಳಿಸಿತು. ಮೊದಲ ಬಾರಿ ಸೋತ ಮಾನೆ ನಂತರ ಉಪಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಸದ್ಯ ಹಾನಗಲ್ ಕ್ಷೇತ್ರದ ಹಾಲಿ ಶಾಸಕರಾಗಿದ್ದಾರೆ. ಕಾಂಗ್ರೆಸ್‌ಸಲ್ಲಿ ಟಿಕೆಟ್ ಸಿಗದ ಕಾರಣ ಮನೋಹರ್ ತಹಶೀಲ್ದಾರ್ ಈಗ ಜೆಡಿಎಸ್ ಸೇರಿದ್ದಾರೆ. ಬಿಜೆಪಿಯಿಂದ ಶಿವರಾಜ್ ಸಜ್ಜನರ್ ಕಣಕ್ಕಿಳಿದಿದ್ದಾರೆ. ಇತ್ತ ಕಾಂಗ್ರೆಸ್ಸಿನಿಂದ ಹಾಲಿ ಶಾಸಕ ಶ್ರೀನಿವಾಸ ಮಾನೆ ಕಣದಲ್ಲಿದ್ದು, ಬಹುತೇಕ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಕ್ಷೇತ್ರದ ವಿಶೇಷತೆ: ಹಾವೇರಿ ಜಿಲ್ಲೆಯ ಹಾನಗಲ್ ಮಲೆನಾಡು ಸೆರಗಿನಲ್ಲಿರುವ ವಿಧಾನಸಭಾ ಕ್ಷೇತ್ರ. ವಿರಾಟಪುರ ಎಂದು ಕರೆಯುವ ಹಾನಗಲ್, ಪಾಂಡವರ ಕಾಲದಲ್ಲಿ ಉತ್ತರಕುಮಾರನ ರಾಜ್ಯವಾಗಿತ್ತು ಎನ್ನುವ ದಂತಕತೆಗಳಿವೆ. ತಾರಕೇಶ್ವರನ ಬೀಡು ಎಂದು ಕರೆಸಿಕೊಳ್ಳುವ ಹಾನಗಲ್ ವೀರಶೈವ ಮಹಾಸಭಾ ಸ್ಥಾಪಿಸಿದ್ದ ಕುಮಾರೇಶ್ವರರ ನೆಲೆಬೀಡು. ಪಂಡಿತ ಪಂಚಾಕ್ಷರಿ ಗವಾಯಿ ಹಾಗೂ ಪಂಡಿತ ಪುಟ್ಟರಾಜ ಗವಾಯಿ ಜನಿಸಿದ ಕ್ಷೇತ್ರ. ಜೊತೆಗೆ, ಇಲ್ಲಿ ಕುಮಾರೇಶ್ವರ ಸ್ಥಾಪಿಸಿದ ಶಿವಯೋಗ ಮಂದಿರ ಇಂದಿಗೂ ಇದೆ. ಒಂದು ಕಾಲದಲ್ಲಿ ಕದಂಬರ ರಾಜ್ಯದ ಶಾಖೆಯಾಗಿದ್ದ ಹಾನಗಲ್‌ನಲ್ಲಿ ತಾರಕೇಶ್ವರ ದೇವಸ್ಥಾನ ಪ್ರಸಿದ್ಧವಾಗಿದೆ.
ಇಲ್ಲಿಯ ಗೌಳಿಗರ ಎಮ್ಮೆ ಕಾದಾಟ ಮತ್ತು ರೈತರ ದನ ಬೆದರಿಸುವ ಸ್ಪರ್ಧೆಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಭತ್ತದ ಕಣಜವಾಗಿದ್ದ ಹಾನಗಲ್‌ನಲ್ಲಿ ಈಗ ಅಡಿಕೆ, ಶುಂಠಿ, ಕಬ್ಬು ಮತ್ತು ಗೋವಿನಜೋಳ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದೆ.