ಹಾವೇರಿ: ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಅತಿ ಚಿಕ್ಕ ಕ್ಷೇತ್ರ ಅಂದ್ರೆ ಬ್ಯಾಡಗಿ. ಬ್ಯಾಡಗಿ ವಿಧಾನಸಭಾ ಕ್ಷೇತ್ರವು ಹಾವೇರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. 2008 ರವರೆಗೆ ಎಸ್ಸಿ ಮೀಸಲಾಗಿದ್ದ ಈ ಕ್ಷೇತ್ರ 2008 ರ ನಂತರ ಸಾಮಾನ್ಯ ಕ್ಷೇತ್ರವಾಗಿದೆ. 2008 ರಲ್ಲಿ ಬಿಜೆಪಿಯ ಸುರೇಶಗೌಡ ಶಾಸಕರಾಗಿದ್ದರು. ನಂತರ 2013 ರಲ್ಲಿ ಕಾಂಗ್ರೆಸ್‌ನ ಬಸವರಾಜ್ ಶಿವಣ್ಣನವರ್ ಶಾಸಕರಾಗಿ ಆಯ್ಕೆಯಾದರು. 2018 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ವಿರೂಪಾಕ್ಷಪ್ಪ ಬಳ್ಳಾರಿ ಶಾಸಕರಾಗಿದ್ದಾರೆ. ಪ್ರಸ್ತುತ ಕಾಂಗ್ರೆಸ್‌ನ ಬಸವರಾಜ್ ಶಿವಣ್ಣನವರ್ ಮತ್ತು ಬಿಜೆಪಿಯ ವಿರೂಪಾಕ್ಷಪ್ಪ ಬಳ್ಳಾರಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಕ್ಷೇತ್ರದ ವಿಶೇಷತೆ :ಹಾವೇರಿ ಜಿಲ್ಲೆಯ ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಗೆ ವಿಶ್ವ ಪ್ರಸಿದ್ಧಿಯಾಗಿದೆ. ಇಲ್ಲಿನ ಮೆಣಸಿನಕಾಯಿ ತಳಿಗಳಾದ ಬ್ಯಾಡಗಿ ಡಬ್ಬಿ ಮತ್ತು ಕಡ್ಡಿ ತಮ್ಮದೇ ಆದ ಬಣ್ಣ, ರುಚಿ ಗಳಿಂದ ಪ್ರಖ್ಯಾತವಾಗಿದೆ. ಕಾಗಿನೆಲೆ ಕನಕದಾಸರ ಕರ್ಮಭೂಮಿ ಕದರಮಂಡಲಗಿ ಕಾಂತೇಶ ಇಲ್ಲಿಯ ಮತ್ತೊಂದು ಪ್ರಸಿದ್ಧ ದೇವಸ್ಥಾನ. ಜೊತೆಗೆ, ಮಹಾತ್ಮ ಗಾಂಧೀಜಿ ಕರೆಕೊಟ್ಟಿದ್ದ ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಏಕೈಕ ಕನ್ನಡಿಗ ಮೈಲಾರ ಮಹದೇವಪ್ಪ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದವರು. ಕಬ್ಬು, ಭತ್ತ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳನ್ನ ಇಲ್ಲಿನ ರೈತರು ಬೆಳೆಯುವ ಮೂಲಕ ಜೀವನ ಸಾಗಿಸುತ್ತಿದ್ದಾರೆ.
ಇದನ್ನೂ ಓದಿ :ಹೆಸರುವಾಸಿ ಘಟಾನುಘಟಿ ರಾಜಕಾರಣಿಗಳಿದ್ದರೂ ಮಧ್ಯ ಕರ್ನಾಟಕ ಅಭಿವೃದ್ಧಿ ಆಗಿದ್ದೆಷ್ಟು ?
ಕಳೆದ ಮೂರು ಚುನಾವಣೆಗಳ ಮಾಹಿತಿ :
- 2008 ರಲ್ಲಿ ಬಿಜೆಪಿಯ ಸುರೇಶಗೌಡ ಪಾಟೀಲ್ ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ಆಯ್ಕೆಯಾಗಿದ್ದರು.
- 2013 ರಲ್ಲಿ ಶಿವರಾಜ್ ಸಜ್ಜನರ್ ಕೆಜೆಪಿಯಿಂದ ಸ್ಪರ್ಧಿಸಿದ್ದರೆ, ಬಸವರಾಜ್ ಶಿವಣ್ಣವರ್ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ವಿಜಯ ಸಾಧಿಸಿದ್ದರು.
- 2018 ರಲ್ಲಿ ಬಿಜೆಪಿಯ ವಿರೂಪಾಕ್ಷಪ್ಪ ಬಳ್ಳಾರಿ ಕಾಂಗ್ರೆಸ್ಸಿನ ಎಸ್ ಆರ್ ಪಾಟೀಲ್‌ಗೆ ಸೋಲಿನ ರುಚಿ ತೋರಿಸಿದ್ದರು.
- ಕಳೆದ 2018 ರ ಚುನಾವಣೆಯಲ್ಲಿ ಬಿಜೆಪಿಯ ವಿರೂಪಾಕ್ಷಪ್ಪ ಬಳ್ಳಾರಿ 91,721 ಮತ ಪಡೆದಿದ್ದರು. ಕಾಂಗ್ರೆಸ್ಸಿನ ಎಸ್ ಆರ್ ಪಾಟೀಲ್ 70,450 ಮತ ಪಡೆದಿದ್ದರು. ಬಿಜೆಪಿಯ ವಿರೂಪಾಕ್ಷಪ್ಪ ಬಳ್ಳಾರಿ 21,271 ಮತಗಳ ಅಂತರದಿಂದ ಎಸ್.ಆರ್.ಪಾಟೀಲ್ ಸೋಲುಣಿಸಿದ್ದರು.