ಹಾವೇರಿ : ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ಏಕೈಕ ಆಲೋಚನೆ ಶೇ 40 ಲಂಚ ಪಡೆಯುವುದು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಆರೋಪಿಸಿದರು. ಹಾವೇರಿಯಲ್ಲಿ ಗುರುವಾರ ಮತ ಪ್ರಚಾರ ನಡೆಸಿದ ಅವರು, ಪಿಎಸ್ಐ ಹಗರಣ, ಗುತ್ತಿಗೆದಾರರ ಆತ್ಮಹತ್ಯೆ, ರೈತರ ಆತ್ಮಹತ್ಯೆ, ಬೆಲೆ ಏರಿಕೆ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಶಾಲಾ ಮಕ್ಕಳಿಗೆ ಪೂರೈಕೆ ಮಾಡುವ ಮೊಟ್ಟೆಯಲ್ಲಿಯೂ ಒಂದು ಲಕ್ಷ 50 ಸಾವಿರ ಕೋಟಿ ರೂಪಾಯಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ದೂರಿದರು.
ಬಿಜೆಪಿ ನಾಯಕರು ಹಣವನ್ನು ಸದುಪಯೋಗ ಮಾಡಿದ್ದರೆ 30 ಸಾವಿರ ಸ್ಮಾರ್ಟ್ ಕ್ಲಾಸ್ ಮಾಡಬಹುದಿತ್ತು. 30 ಲಕ್ಷ ಬಡ ಜನರಿಗೆ ಸಂಪೂರ್ಣವಾಗಿ ಉಚಿತವಾಗಿ ಮನೆ ಕಟ್ಟಬಹುದಿತ್ತು. 100 ಸುಸಜ್ಜಿತ ಆಸ್ಪತ್ರೆಗಳೊಂದಿಗೆ 100ಕ್ಕೂ ಅಧಿಕ ಏಮ್ಸ್ ಆಸ್ಪತ್ರೆ, ಬೆಂಗಳೂರಿನಲ್ಲಿ ಮೆಟ್ರೋ ಯೋಜನೆಯನ್ನು ನಗರದ ತುಂಬಾ ಮಾಡಿ, ನಿಮ್ಮ ಅಭಿವೃದ್ದಿಗೂ ಬಳಸಬಹುದಿತ್ತು ಎಂದರು.
ಕಾಂಗ್ರೆಸ್ ಸರ್ಕಾರವಿದ್ದಾಗ ನಂದಿನಿ ಸಂಸ್ಥೆ ಸಾಕಷ್ಟು ಹಾಲು ಉತ್ಪನ್ನಗಳನ್ನು ಉತ್ಪಾದಿಸುತ್ತಿತ್ತು. ರೈತರಿಗೆ ಉತ್ತಮ ದರ ಸಿಗುತ್ತಿತ್ತು. ಆದರೆ ಈಗ ನಂದಿನಿ ಬಿಟ್ಟು ಗುಜರಾತ್‌ನಿಂದ ಅಮೂಲ್ ತರುತ್ತೇವೆ ಎನ್ನುತ್ತಿದ್ದಾರೆ. ಅಷ್ಟೊಳ್ಳೆ ಕಾರ್ಯ ನಿರ್ವಹಿಸುತ್ತಿದ್ದ ನಂದಿನಿಯನ್ನು ಇಲ್ಲಿ ನಷ್ಟಕ್ಕೆ ಸಿಲುಕಿಸಿ ಗುಜರಾತ್‌ನ ಅಮೂಲ್ ತಂದರೆ ಅಲ್ಲಿಯ ಅಭಿವೃದ್ದಿಯಾಗುತ್ತದೆ. ಅಮೂಲ್ ರಾಜ್ಯಕ್ಕೆ ಬಂದರೆ ಒಂದು ಕೋಟಿ ಜನರ ಪರಿಸ್ಥಿತಿ ಕೆಡುತ್ತೆ. ಇದರ ಬಗ್ಗೆ ಗೊತ್ತಿಲ್ಲದ ಬಿಜೆಪಿ ನಾಯಕರಿಗೆ ಯಾವ ಸಂಸ್ಥೆಯಿಂದ ಎಷ್ಟೆಷ್ಟು ಲೂಟಿ ಹೊಡೆಯಬಹುದು ಎಂಬುದೊಂದೇ ಚಿಂತೆಯಾಗಿ ಎಂದು ಪ್ರಿಯಾಂಕಾ ಗಾಂಧಿ ಕಿಡಿಕಾಡಿದರು.
ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಎಂದು ರೈತರು ರಸ್ತೆ ಮೇಲೆ ನಿಂತಿದ್ದಾರೆ. ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಣಣ್ ಸವದಿಯಂತಹ ನಾಯಕರನ್ನು ಬಿಜೆಪಿ ಅವಮಾನಿಸಿದೆ. ಕಳೆದ ಮೂರು ವರ್ಷದಿಂದ ಬಿಜೆಪಿ ಸರ್ಕಾರದ ಲೂಟಿಯಿಂದ ಜನರು ಸಾಕಷ್ಟು ನೋವು ಅನುಭವಿಸಿದ್ದಾರೆ. ಬಿಜೆಪಿ ನಿರುದ್ಯೋಗ ಸಮಸ್ಯೆ ಕಡಿಮೆ ಮಾಡಲಿಲ್ಲ, ಬದಲಿಗೆ ಹೆಚ್ಚಿಸಿದ್ದಾರೆ ಎಂದು ಟೀಕಿಸಿದರು.
ಕರ್ನಾಟಕ ರಾಜ್ಯಕ್ಕೆ ಶ್ರೇಷ್ಠ ಇತಿಹಾಸವಿದೆ. ವಿಶ್ವಗುರು ಬಸವಣ್ಣ ಮತ್ತು ಕಿತ್ತೂರು ರಾಣಿ ಚೆನ್ನಮ್ಮರಂತಹ ಮಹಾನ್ ನಾಯಕರು ಹುಟ್ಟಿದ ನಾಡು ಇದು. ಹಾವೇರಿ ಶಿಶುನಾಳ ಶರೀಫ ಮತ್ತು ಕನಕದಾಸರ ನಾಡು. ಗುದ್ಲೆಪ್ಪ ಹಳ್ಳಿಕೇರಿ ಮೈಲಾರ ಮಹದೇವಪ್ಪನಂತ ಶ್ರೇಷ್ಠ ಸ್ವಾತಂತ್ರ ಹೋರಾಟಗಾರರನ್ನು ಕಂಡ ಜಿಲ್ಲೆ ಹಾವೇರಿ ಎಂದು ತಿಳಿಸಿದರು.
ಸಿಎಂ ಬೊಮ್ಮಾಯಿ ರೋಡ್ ಶೋ :ಸಿಎಂ ಆದ ನಂತರ ನಿಮ್ಮ ಜೊತೆ ಹೆಚ್ಚು ಬೆರೆಯಲು ಸಾಧ್ಯವಾಗದಿರುವುದಕ್ಕೆ ಬೇಸರವಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದರು. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕುರುಬರ ಮಲ್ಲೂರು ಗ್ರಾಮದಲ್ಲಿ ಗುರುವಾರ ರೋಡ್ ಶೋ ನಡೆಸಿ ಮಾತನಾಡಿ, ನಿಮ್ಮೆಲ್ಲರ ಆಶೀರ್ವಾದದಿಂದ ಶಾಸಕ, ಸಚಿವ ಮತ್ತು ಸಿಎಂ ಆಗಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದೆ. ರಾಜ್ಯದ ಆಡಳಿತ ಮತ್ತು ಸೇವೆ ಮಾಡುವ ಸಂದರ್ಭದಲ್ಲಿ ನಿಮ್ಮ ಮತಕ್ಕೆ ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬರದಂತೆ ನೋಡಿಕೊಂಡಿದ್ದೇನೆ ಎಂದು ತಿಳಿಸಿದರು. ಶಿಗ್ಗಾಂವಿ, ಸವಣೂರು ತಾಲೂಕಿನ ವಿವಿಧ ಗ್ರಾಮಗಳು ತೆಗ್ಗಿಹಳ್ಳಿ, ಕುರಬರಮಲ್ಲೂರು, ಹುರಳಿಕೊಪ್ಪಿ ಗ್ರಾಮಗಳಲ್ಲಿ ಸಿಎಂ ಮತಬೇಟೆ ಮಾಡಿದರು.
ಇದನ್ನೂ ಓದಿ :ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯಗೆ ಭಜರಂಗಿ ಬಲ.. ಮಾಜಿ ಸಿಎಂ ಪರ ಶಿವಣ್ಣ ಭರ್ಜರಿ ಪ್ರಚಾರ