ಹಾವೇರಿ :ಉತ್ತರಕರ್ನಾಟಕದ ಪ್ರಮುಖ ಕುರಿ ಮಾರುಕಟ್ಟೆಗಳಲ್ಲಿ ಹಾವೇರಿ ಪ್ರಸಿದ್ಧವಾಗಿದೆ. ಹಾವೇರಿಯ ಕುರಿ ಮಾರುಕಟ್ಟೆಯಲ್ಲಿ ಪ್ರತಿ ಗುರುವಾರ ಕುರಿ ವಹಿವಾಟು ಜೋರಾಗಿಯೇ ನಡೆಯುತ್ತದೆ. ಮಾರುಕಟ್ಟೆ ಸುತ್ತಮುತ್ತಲ ಪ್ರದೇಶಗಳಿಂದ 10 ಸಾವಿರಕ್ಕೂ ಅಧಿಕ ಕುರಿಗಳು ಮಾರಾಟಕ್ಕೆ ಬರುತ್ತವೆ.
ತಿಂಗಳಿಗೆ 10 ಕೋಟಿಗೂ ಅಧಿಕ ವಹಿವಾಟನ್ನು ಹಾವೇರಿ ಕುರಿ ಮಾರುಕಟ್ಟೆ ನಡೆಸುತ್ತೆ. ಹಾವೇರಿ, ರಾಣೆಬೆನ್ನೂರು, ಹಿರೇಕೆರೂರು, ಹುಬ್ಬಳ್ಳಿ, ನವಲಗುಂದ, ನರಗುಂದ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಿಂದ ಸಹ ಇಲ್ಲಿ ಕುರಿಗಾಯಿಗಳು ಕುರಿಗಳನ್ನ ತಂದು ಮಾರುತ್ತಾರೆ. ಈ ಭಾಗದಲ್ಲಿ ಕುರುಬ ಸಮುದಾಯ ಅಧಿಕ ಸಂಖ್ಯೆಯಲ್ಲಿರುವುದರಿಂದ ಹೆಚ್ಚು ಕುರಿಗಳು ಮಾರುಕಟ್ಟೆಗೆ ಬರುತ್ತವೆ.
ಪ್ರಮುಖವಾಗಿ ಹಾವೇರಿ ಕುರಿ ಮಾರುಕಟ್ಟೆಯನ್ನ ಕಟಿಂಗ್ ಪರ್ಪಸ್ ಮಾರುಕಟ್ಟೆ ಎಂದು ಕರೆಯುತ್ತಾರೆ. ಅಂದರೆ ಇಲ್ಲಿ ಬಲಿಷ್ಠ ಮತ್ತು ಸದೃಢ ಕುರಿಗಳು ಮಾರಾಟಕ್ಕೆ ಬರುತ್ತವೆ. ಈ ಹಿನ್ನೆಲೆಯಲ್ಲಿ ಹಾವೇರಿ ಕುರಿ ಮಾರುಕಟ್ಟೆಗೆ ತಮಿಳುನಾಡು, ಆಂಧ್ರಪ್ರದೇಶ, ಮೈಸೂರು, ಬೆಂಗಳೂರು ಮತ್ತು ಹಾಸನ ಜಿಲ್ಲೆಯ ವರ್ತಕರು ಆಗಮಿಸುತ್ತಾರೆ. ಬುಧವಾರ ರಾತ್ರಿಯಿಂದ ಆರಂಭವಾಗುವ ಕುರಿ ವ್ಯಾಪಾರ ಗುರುವಾರ ಮಧ್ಯಾಹ್ನದವರೆಗೆ ನಡೆಯುತ್ತೆ. ಕುರಿಗಳ ಸಾಗಾಟಕ್ಕಾಗಿ ವಿಶೇಷ ಲಾರಿಗಳಿದ್ದು, ಆ ಲಾರಿಗಳಲ್ಲಿ ಖರೀದಿಸಿದ ಕುರಿಗಳನ್ನ ವರ್ತಕರು ದೂರದ ಊರುಗಳಿಗೆ ಸಾಗಿಸುತ್ತಾರೆ.
ಕುರಿ ಮಾರುಕಟ್ಟೆಯಲ್ಲಿ ಮೂಲಸೌಕರ್ಯದ ಕೊರತೆ: ಇನ್ನು ಹಾವೇರಿ ಸುತ್ತಮುತ್ತಲಿನ ಮಾಂಸಾಹಾರಿ ಖಾನಾವಳಿ ಮತ್ತು ಢಾಬಾ ಮಾಲೀಕರು ಸಹ ಮಾರುಕಟ್ಟೆಯಲ್ಲಿ ಕುರಿ ಖರೀದಿಸುತ್ತಾರೆ. ಹೊಸದಾಗಿ ಕುರಿ ಸಾಕುವವರಿಗೆ ಇಲ್ಲಿ ಮರಿಗಳು ಸಹ ಸಿಗುತ್ತವೆ. ಕುರಿ ಸಾಕಾಣಿಕೆ ನಡೆಸುವವರು ಸಹ ಇಲ್ಲಿ ಆಗಮಿಸಿ ಮರಿಕುರಿಗಳನ್ನ ಖರೀದಿಸುತ್ತಾರೆ. ಆದರೆ, ತಿಂಗಳಿಗೆ ಹತ್ತಾರು ಕೋಟಿ ರೂಪಾಯಿ ವಹಿವಾಟು ನಡೆಸುವ ಮಾರುಕಟ್ಟೆಗೆ ಮೂಲ ಸೌಕರ್ಯಗಳಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.