ಹಾವೇರಿ:ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ರನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಹಾವೇರಿಯ ಮಹಿಳಾ ಕಾಂಗ್ರೆಸ್ ಆಗ್ರಹಿಸಿದೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಪ್ರೇಮಾ ಪಾಟೀಲ್, ಈಗಾಗಲೇ ದೆಹಲಿಯಲ್ಲಿ ಕುಸ್ತಿಪಟುಗಳು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಅದರೇ ಕೇಂದ್ರ ಸರ್ಕಾರದಿಂದ ಅವರಿಗೆ ಯಾವುದೇ ಸಹಕಾರ ಸಿಗುತ್ತಿಲ್ಲ ಎಂದು ಆರೋಪಿಸಿದರು.
ಕುಸ್ತಿ ಸಂಸ್ಥೆ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್, ಕುಸ್ತಿಪಟುಗಳ ಆಯ್ಕೆ ಸಂದರ್ಭದಲ್ಲಿ ಅವರಿಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಿದ್ದಾರೆ ಮತ್ತು ಅನುಚಿತವಾಗಿ ವರ್ತನೆ ಮಾಡಿದ್ದಾರೆ. ಲೈಂಗಿಕವಾಗಿ ಕಿರುಕುಳವನ್ನು ನೀಡಿದ್ದಾರೆ ಎಂದು ಎಫ್ಐಆರ್ ದಾಖಲಾಗಿದೆ. ಏಪ್ರಿಲ್ 28 ರಿಂದ ಇಲ್ಲಿಯವರೆಗೂ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಿಗೆ ಕೇಂದ್ರ ಸರ್ಕಾರ ಸಹಕರಿಸುತ್ತಿಲ್ಲ ಎಂದು ದೂರಿದರು.
ಕುಸ್ತಿಪಟುಗಳಿಗೆ ಎಷ್ಟು ನೋವಾಗಿದೆ ಎಂದರೆ ತಾವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆದ್ದಿರುವ ಪದಕಗಳನ್ನು ಗಂಗಾ ನದಿಗೆ ಎಸೆಯುವಷ್ಟು ನೋವಾಗಿದೆ. ಅವರಿಗೆ ರಕ್ಷಣೆ ಇಲ್ಲದಂತಾಗಿದೆ, ಅವರು ಪ್ರತಿಭಟನೆ ಮಾಡುತ್ತಿದ್ದ ಸಂದರ್ಭದಲ್ಲಿ ಹೊಸ ಸಂಸತ್ ಭವನ ಉದ್ಘಾಟನೆ ನಡೆಯುತ್ತಿತ್ತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಕುಸ್ತಿಪಟುಗಳನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಅವರ ಮನವಿಯನ್ನು ಅಲಿಸಬಹುದಾಗಿತ್ತು ಎಂದರು.
ಇನ್ನು ಕೇಂದ್ರ ಸಚಿವ ಅಮಿತ್ ಶಾ ಪ್ರತಿಭಟನೆಯನ್ನ ಹತ್ತಿಕ್ಕುವ ಯತ್ನ ಮಾಡುತ್ತಿದ್ದಾರೆ ಎಂದು ಪ್ರೇಮಾ ಪಾಟೀಲ್ ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಮಹಿಳಾ ಕ್ರೀಡಾಪಟುಗಳು ನೊಂದಿದ್ದು ನಾನು ಸಹ ಖೋ ಖೋ ಆಟಗಾರ್ತಿಯಾಗಿದ್ದು, ವೈಯಕ್ತಿಕವಾಗಿ ಸಹ ಮಹಿಳೆ ಕ್ರೀಡಾಪಟುಗಳಿಗೆ ಬೆಂಬಲ ಸೂಚಿಸುತ್ತೇನೆ. ಕಾಂಗ್ರೆಸ್ ಸರ್ಕಾರದ ಸಿಎಂ, ಡಿಸಿಎಂ ಸೇರಿದಂತೆ ಕಾಂಗ್ರೆಸ್ ಪಕ್ಷ ನಿಮ್ಮ ಬೆಂಬಲಕ್ಕೆ ನಿಂತಿದೆ. ನಿಮಗೆ ನ್ಯಾಯ ಸಿಗುವವರೆಗೆ ಪ್ರತಿಭಟನೆ ಮಾಡಿ ಎಂದು ಪ್ರೇಮಾ ಪಾಟೀಲ್ ಕರೆ ಕೊಟ್ಟರು.