ಹಾವೇರಿ :ಕೆಲ ಬಟ್ಟೆ ವ್ಯಾಪಾರಸ್ಥರು ಹೊರಗೆ ಬೀಗ ಹಾಕಿದಂತೆ ಮಾಡಿ ಅಂಗಡಿಯೊಳಗೆ ಗ್ರಾಹಕರನ್ನ ಕರೆದುಕೊಂಡು ಹೋಗಿ ವ್ಯಾಪಾರ ಮಾಡ್ತಿದ್ದ ಘಟನೆಗಳು ಬೆಳಕಿಗೆ ಬಂದಿವೆ. ಸದ್ಯ ಪೊಲೀಸರು ಈ ಅಂಗಡಿಗಳನ್ನು ಸಂಪೂರ್ಣ ಬಂದ್ ಮಾಡಿಸಿದ್ದಾರೆ.
ಕೊರೊನಾ ಹಿನ್ನೆಲೆ ಹಾವೇರಿ ನಗರದಲ್ಲಿ ಬಹುತೇಕ ಮಳಿಗೆಗಳನ್ನ ಪೊಲೀಸ್ ಇಲಾಖೆ ಬಂದ್ ಮಾಡಿಸಿದೆ. ಕಿರಾಣಿ, ಔಷಧಿ ಮತ್ತು ಅಗತ್ಯ ವಸ್ತುಗಳ ಅಂಗಡಿಗಳನ್ನ ಬಿಟ್ಟು ಉಳಿದ ಅಂಗಡಿಗಳನ್ನ ಪೊಲೀಸರು ಬಂದ್ ಮಾಡಿಸಿದ್ದರು.
ಆದರೆ, ನಗರದ ಕೆಲ ಬಟ್ಟೆ ವ್ಯಾಪಾರಸ್ಥರು ಅಂಗಡಿಯೊಳಗೆ ಗ್ರಾಹಕರನ್ನ ಕರೆದುಕೊಂಡು ಹೊರಗೆ ಬೀಗ ಹಾಕಿದಂತೆ ಮಾಡಿ ಪೊಲೀಸ್ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ವಿಷಯ ಬೆಳಕಿಗೆ ಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು ಈ ರೀತಿಯ ಬಟ್ಟೆ ಅಂಗಡಿಗಳ ಮೇಲೆ ದಾಳಿ ಮಾಡಿದರು. ಹೊರಗೆ ಹಾಕಿದ ಬೀಗಗಳನ್ನು ತೆರೆದು ಒಳಗಿರುವ ಗ್ರಾಹಕರನ್ನ ಹೊರಗೆ ಕರೆತಂದರು.
ದೇಶಕ್ಕೆ ದೇಶವೇ ಕೊರೊನಾ ಆತಂಕದಲ್ಲಿದೆ. ಈ ಸಂದರ್ಭದಲ್ಲಿ ಪ್ರತಿಯೊಬ್ಬರ ಪಾತ್ರ ಪ್ರಮುಖವಾಗಿದೆ. ಈ ರೀತಿ ಮಾಡುತ್ತಿರುವುದು ಸರಿಯಲ್ಲ ಎಂದು ಬಟ್ಟೆ ಅಂಗಡಿಗಳ ಮಾಲೀಕರಿಗೆ ಪೊಲೀಸರು ವಾರ್ನಿಂಗ್ ನೀಡಿದರು. ಈ ರೀತಿ ಬಟ್ಟೆ ಖರೀದಿಗೆ ಹೋದ ಗ್ರಾಹಕರಿಗೆ ಸಹ ಛೀಮಾರಿ ಹಾಕಿದರು.