ಹಾವೇರಿಯ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಹಾವೇರಿ :ಜಿಲ್ಲೆಯ ಆಲದಕಟ್ಟಿ ಗ್ರಾಮದಲ್ಲಿನ ಭೂಮಿಕಾ ಪಟಾಕಿ ಅಂಗಡಿ ಮತ್ತು ಗೋದಾಮಿನಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟಾಕಿ ಅಂಗಡಿ ಮಾಲೀಕ ಕುಮಾರ್ ಎಂಬಾತನನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ಮುಂದುವರೆಸಿದ್ದಾರೆ. ಇಂದು ಘಟನಾ ಸ್ಥಳಕ್ಕೆ ಹಾವೇರಿ ಜಿಲ್ಲಾ ಉಸ್ತುವರಿ ಸಚಿವರಾದ ಶಿವಾನಂದ ಪಾಟೀಲ್ ಭೇಟಿ ನೀಡಲಿದ್ದಾರೆ.
ನಿನ್ನೆ ಮಧ್ಯಾಹ್ನ 12 ಗಂಟೆಯಿಂದ ಹೊತ್ತಿ ಉರಿಯಲು ಪ್ರಾರಂಭಿಸಿದ ಗೋದಾಮಿನಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ಇಂದು ಮುಂಜಾನೆ 4 ಗಂಟೆ ವರೆಗೆ ಅಗ್ನಿ ಶಾಮಕ ಸಿಬ್ಬಂದಿ ನಿರಂತರ 16 ಗಂಟೆಗಳ ಕಾರ್ಯಾಚರಣೆ ನಡೆಸಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುರಂತದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಮೃತರನ್ನು 25 ವರ್ಷದ ದ್ಯಾಮಪ್ಪ ಓಲೇಕಾರ, 28 ವರ್ಷದ ರಮೇಶ್ ಬಾರ್ಕಿ ಮತ್ತು 22 ವರ್ಷದ ಶಿವಲಿಂಗ ಅಕ್ಕಿ ಎಂದು ಗುರುತಿಸಲಾಗಿದೆ. ಸಾವನ್ನಪ್ಪಿರುವವರೆಲ್ಲ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದೆ. ಘಟನೆಯಿಂದ ಸುಮಾರು ಒಂದೂವರೆ ಕೋಟಿ ರೂಪಾಯಿ ಮೌಲ್ಯದ ಪಟಾಕಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಪರಿಹಾರ ಘೋಷಣೆ ಮಾಡಿದ ಸಿಎಂ : ಘಟನೆಯಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲಾ ಐದು ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದ್ದಾರೆ. ಗಣೇಶ ಚತುರ್ಥಿ ಮತ್ತು ದೀಪಾವಳಿ ಹಬ್ಬದ ನಿಮಿತ್ತ ಅಂಗಡಿ ಮಾಲೀಕರು ಭಾರಿ ಪ್ರಮಾಣದ ಪಟಾಕಿ ಸಂಗ್ರಹಿಸಿದ್ದರು ಎಂಬ ಮಾಹಿತಿ ಇದೆ. ಪಟಾಕಿ ಸಿಡಿದ ಶಬ್ದ ಹಾವೇರಿವರೆಗೂ ಕೇಳಿಸಿದೆ. ಭಾರಿ ಪ್ರಮಾಣದ ಸದ್ದು ಕೇಳುತ್ತಿದ್ದಂತೆ ನೂರಾರು ಜನ ಸ್ಥಳಕ್ಕೆ ಜಮಾಯಿಸಿದ್ದು, ಗೋದಾಮಿನ ಪಕ್ಕದಲ್ಲಿರುವವರನ್ನು ಬೇರೆ ಕಡೆ ಸ್ಥಳಾಂತರಿಸಿದ್ದರಿಂದ ಹೆಚ್ಚಿನ ಅವಘಡ ತಪ್ಪಿದೆ.
ಇದನ್ನೂ ಓದಿ :ಹಾವೇರಿಯ ಪಟಾಕಿ ದಾಸ್ತಾನು ಗೋದಾಮಿನಲ್ಲಿ ಬೆಂಕಿ.. ಒಂದೂವರೆ ಕೋಟಿ ರೂ. ಮೌಲ್ಯದ ಪಟಾಕಿ ಸುಟ್ಟು ಭಸ್ಮ
ಗೋದಾಮಿನ ಗೇಟ್ ಅನ್ನು ವೆಲ್ಡಿಂಗ್ ಮಾಡಿಸಲು ಮುಂದಾಗಿರುವುದೇ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ವೆಲ್ಡಿಂಗ್ ಮಾಡುತ್ತಿದ್ದಾಗ ಕಿಡಿ ತಾಗಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಶಂಕೆ ವ್ಯಕ್ತವಾಗಿದೆ. ವಿಷಯ ಗೊತ್ತಾಗುತ್ತಿದೆಯಂತೆ ನಿನ್ನೆ ಸ್ಥಳಕ್ಕೆ ಜಿಲ್ಲಾಧಿಕಾರಿ ರಘುನಂದಮೂರ್ತಿ, ಎಸ್ಪಿ ಶಿವಕುಮಾರ್ ಗುಣಾರೆ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ತನಿಖೆ ಬಳಿಕವೇ ಘಟನೆ ಹೇಗೆ ನಡೆಯಿತು. ಬೆಂಕಿ ಹೊತ್ತಿಕೊಳ್ಳಲು ಪಕ್ಕಾ ಕಾರಣ ಏನು? ಗೋದಾಮಿಗೆ ಮಾಲೀಕ ಲೈಸನ್ಸ್ ಪಡೆದಿದ್ದರಾ ಎಂಬ ಬಗ್ಗೆ ಗೊತ್ತಾಗಲಿದೆ.
ತನಿಖೆಗೆ ಮಾಜಿ ಸಿಎಂ ಬೊಮ್ಮಾಯಿ ಆಗ್ರಹ:ಪಟಾಕಿ ಸಿಡಿಮದ್ದು ಗೋದಾಮಿನಲ್ಲಿ ನಾಲ್ವರು ಕಾರ್ಮಿಕರು ಸಜೀವ ದಹನವಾಗಿರುವ ಘಟನೆ ಅತ್ಯಂತ ದುಖದ ಸಂಗತಿಯಾಗಿದೆ. ರಾಜ್ಯ ಸರ್ಕಾರ ಈ ಘಟನೆಗೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ, ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈ ರೀತಿಯ ಅಪಾಯಕಾರಿ ಸ್ಥಳಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ರಕ್ಷಣೆಗೆ ಅಗತ್ಯವಿರುವ ಮುಂಜಾಗ್ರತಾ ಕ್ರಮಗಳ ಕುರಿತು ಅಧಿಕಾರಿಗಳು ನಿಗಾವಹಿಸಬೇಕು. ಹಾವೇರಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಈ ರೀತಿಯ ಪಟಾಕಿ ಸಿಡಿಮದ್ದು ದಾಸ್ತಾನು ಕೇಂದ್ರಗಳ ಕುರಿತು ಪರಿಶೀಲನೆ ನಡೆಸಿ ಕಾರ್ಮಿಕರಿಗೆ ಸೂಕ್ತ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಬೆಂಕಿ ಅವಘಡದಲ್ಲಿ ಸಜೀವ ದಹನವಾಗಿರುವ ಕಾರ್ಮಿಕರ ಕುಟುಂಬಗಳಿಗೆ ರಾಜ್ಯ ಸರ್ಕಾರ ತಕ್ಷಣ ಸೂಕ್ತ ಪರಿಹಾರ ನೀಡಬೇಕು. ಹಾಗೂ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿರುವ ಬೊಮ್ಮಾಯಿ, ದುರ್ಘಟನೆಯಲ್ಲಿ ಮೃತರ ಕುಟುಂಬಗಳಿಗೆ ರಾಜ್ಯ ಬಿಜೆಪಿ ವತಿಯಿಂದ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ :ಹಾವೇರಿ : ಪಟಾಕಿ ದಾಸ್ತಾನು ಗೋದಾಮಿಗೆ ಬೆಂಕಿ... ಸಾವಿನ ಸಂಖ್ಯೆ 4ಕ್ಕೆ ಏರಿಕೆ... ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ