ಹಾನಗಲ್:ಲಾಕ್ಡೌನ್ ಹಿನ್ನೆಲೆ ರಕ್ತದಾನಿಗಳಿಲ್ಲದೇ ರಕ್ತದ ಕೊರತೆಯಿಂದಾಗಿ ಹೆರಿಗೆ ಹಾಗೂ ಇನ್ನಿತರೆ ಚಿಕಿತ್ಸೆಗಳಿಗೆ ಭಾರಿ ಸಮಸ್ಯೆ ಎದುರಾಗಿತ್ತು. ಈ ಸಮಸ್ಯೆ ಅರಿತ ಪೊಲೀಸ್ ಪೇದೆಯೊಬ್ಬರು ಮಾದರಿ ಕಾರ್ಯಕ್ಕೆ ಮುಂದಾಗಿದ್ದಾರೆ.
ರಕ್ತದಾನಕ್ಕೆ ಪ್ರೋತ್ಸಾಹಿಸಿದ ಪೊಲೀಸ್ ಪೇದೆ.. ಪೊಲೀಸ್ ಪೇದೆ ಡಾ.ಕರಿಬಸಪ್ಪ ಗೊಂದಿ ಎಂಬುವರು ಸ್ನೇಹ ಮೈತ್ರಿ ರಕ್ತದಾನಿಗಳ ಬಳಗ ಕಟ್ಟಿಕೊಂಡು ಯುವಕರನ್ನು ರಕ್ತದಾನ ಮಾಡುವಂತೆ ಪ್ರೋತ್ಸಾಹಿಸುತ್ತಿದ್ದಾರೆ.
ಪೊಲೀಸ್ ಪೇದೆ ಡಾ.ಕರಿಬಸಪ್ಪ ಗೊಂದಿ.. ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿ ಆಲೂರ ಗ್ರಾಮದ ಪೇದೆ ಗೊಂದಿ, ಆಡೂರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊರೊನಾ ಹಾವಳಿ ಪರಿಣಾಮ ರಕ್ತನಿಧಿಗಳಲ್ಲಿ ರೋಗಿಗಳಿಗೆ ರಕ್ತದ ಕೊರತೆ ಉಂಟಾಗಿತ್ತು. ಈ ಮೊದಲು ಕಾಲೇಜುಗಳಲ್ಲಿ ರಕ್ತದಾನ ಶಿಬಿರ ನಡೆಸುತ್ತಿದ್ದ ಕಾರಣ ಕೊರತೆ ಕಂಡಿರಲಿಲ್ಲ. ಲಾಕ್ಡೌನ್ ಹಿನ್ನೆಲೆ ರಕ್ತ ಸಂಗ್ರಹಕ್ಕೆ ಭಾರಿ ಕಷ್ಟವಾಗಿತ್ತು.
ಜಿಲ್ಲೆಯಲ್ಲಿ ಪ್ರತಿ ದಿನ ಸುಮಾರು 15-20 ಸ್ರ್ತೀಯರು ಹೆರಿಗೆ ಶಸ್ತ್ರಚಿಕಿತ್ಸೆಗೊಳಗಾಗುತ್ತಿದ್ದಾರೆ. ಇದರಲ್ಲಿ 10 ಜನರಿಗೆ ರಕ್ತದ ಅವಶ್ಯಕತೆ ಇದೆ. ಇನ್ನೂ ಜಿಲ್ಲೆಯಲ್ಲಿ 28 ಮಕ್ಕಳು ತವಷೀಮಿಯಾ ರೋಗದವರಿದ್ದು, 20 ದಿನಕ್ಕೊಮ್ಮೆ ರಕ್ತ ಹಾಕಿಸಬೇಕು. ಹೀಗೆ ಹತ್ತು ಹಲವು ಅವಶ್ಯಕತೆಗಳು ನಿತ್ಯ ಇವೆ. ಸ್ವತಃ ರಕ್ತ ಸಂಬಂಧಿಗಳು ರಕ್ತದಾನಕ್ಕೆ ಹಿಂದೇಟು ಹಾಕುತ್ತಿರುವುದು ವಿಪರ್ಯಾಸ.
ಅದಕ್ಕಾಗಿ ಪೇದೆ ಡಾ.ಕರಬಸಪ್ಪ ಗೊಂದಿ ಈ ಬಳಗದ ಮೂಲಕ ರಕ್ತದಾನ ಮಾಡಿಸುತ್ತಿದ್ದಾರೆ. ಹಾನಗಲ್ ತಾಲೂಕಿ ಗ್ರಾಮಗಳಾದ ಹೊಂಕಣ, ಶೇಷಗಿರಿ, ಅಕ್ಕಿಆಲೂರ, ತಿಳವಳ್ಳಿ ಸೇರಿ ಹಲವು ಯುವಕರು ಲಾಕ್ಡೌನ್ ಇದ್ದರೂ 31ಜನ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯುವಕರನ್ನ ರಕ್ತದಾನ ಮಾಡಿಸುವಂತೆ ಪ್ರೋತ್ಸಾಹಿಸುತ್ತಿರುವ ಪೇದೆ ಡಾ.ಕರಬಸಪ್ಪ ಗೊಂದಿ ಅವರ ಕಾರ್ಯ ಶ್ಲಾಘನೀಯ.