ಹಾವೇರಿ/ಬೆಂಗಳೂರು:ಉಕ್ರೇನ್ ಮೇಲೆ ರಷ್ಯಾ ನಡೆಸಿದ ಯುದ್ಧದ ವೇಳೆ ಮೃತಪಟ್ಟ ಹಾವೇರಿಯ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ಗ್ಯಾನಗೌಡರ ಕುಟುಂಬವನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಎರಡು ದಿನಗಳ ರಾಜ್ಯ ಪ್ರವಾಸಕ್ಕೆ ಆಗಮಿಸುವ ವೇಳಾಪಟ್ಟಿ ನಿಗದಿಯಾಗುತ್ತಿದ್ದಂತೆ ನವೀನ್ ಕುಟುಂಬ ಸದಸ್ಯರಿಗೆ ಪ್ರಧಾನಿ ಕಚೇರಿಯಿಂದ ಮಾಹಿತಿ ರವಾನಿಸಿ ಬೆಂಗಳೂರಿಗೆ ಆಗಮಿಸುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಬೆಂಗಳೂರಿಗೆ ಆಗಮಿಸಿದ್ದ ನವೀನ್ ಕುಟುಂಬ ಸದಸ್ಯರನ್ನು ಪ್ರಧಾನಿ ಮೋದಿ ಭೇಟಿ ಮಾಡಿದರು.
ಕೊಮ್ಮಘಟ್ಟದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶದ ವೇದಿಕೆ ಹಿಂಭಾಗದಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ನವೀನ್ ತಂದೆ ಶೇಖರಗೌಡ ಗ್ಯಾನಗೌಡರ, ತಾಯಿ ವಿಜಯಲಕ್ಷ್ಮೀ ಮತ್ತು ಸಹೋದರ ಹರ್ಷನನ್ನು ಭೇಟಿ ಮಾಡಿದ ಮೋದಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಸಿಎಂ ಬಸವರಾಜ ಸಮ್ಮುಖದಲ್ಲಿ ಕೆಲಕಾಲ ಮಾತುಕತೆ ನಡೆಸಿ ಕುಟುಂಬಕ್ಕೆ ಧೈರ್ಯ ತುಂಬಿದರು. ನಂತರ ನವೀನ್ ಮೃತದೇಹವನ್ನು ತರಿಸಿಕೊಟ್ಟಿದ್ದಕ್ಕೆ ಕುಟುಂಬ ಸದಸ್ಯರು ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದರು.