ಹಾವೇರಿ: ಸವಣೂರು ತಾಲೂಕಿನ ಕಳಸೂರು ಗ್ರಾಮದಲ್ಲಿರುವ ವರದಾ ನದಿ ಮೇಲೆ ಚಿಕ್ಕದಾದ ಸೇತುವೆ ಇದ್ದು, ಮಳೆಗಾಲದಲ್ಲಿ ಸೇತುವೆ ಮೇಲೆ ನೀರು ಹರಿಯುತ್ತದೆ. ಹಾಗಾಗಿ ಸೇತುವೆ ಎತ್ತರ ಹೆಚ್ಚಿಸಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ, ಜನ ಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.
ಸುಮಾರು 20ಕ್ಕೂ ಅಧಿಕ ಗ್ರಾಮಗಳ ಜನರು ಹಾವೇರಿ ಹಾಗೂ ಇಲ್ಲಿರುವ ಜಿಲ್ಲಾಡಳಿತ ಕಚೇರಿಗೆ ಈ ಸೇತುವೆ ಮೇಲೆಯೇ ಸಂಚರಿಸುತ್ತಾರೆ. ಕಳಸೂರು, ಕೊಳೂರು, ಹತ್ತಿಮತ್ತೂರು, ಜಲ್ಲಾಪುರ, ತೊಂಡೂರು ಗ್ರಾಮಗಳಿಗಂತೂ ಈ ಸೇತುವೆ ಸಂಪರ್ಕ ಸೇತುವಾಗಿದೆ. ಆದರೆ, ಮಳೆಗಾಲದಲ್ಲಿ ವರದಾ ನದಿ ಮೈದುಂಬಿಕೊಳ್ಳುತ್ತಿದ್ದಂತೆ ಸೇತುವೆ ಮುಳುಗಡೆಯಾಗುತ್ತದೆ.
ಮತ್ತೆ ನದಿ ನೀರು ಸೇತುವೆ ಕೆಳಗೆ ಬರುವವರೆಗೆ ಈ ಗ್ರಾಮಗಳ ಮತ್ತು ಜಿಲ್ಲಾಡಳಿತ ಕಚೇರಿಯ ಸಂಪರ್ಕ ಕಡಿತಗೊಳ್ಳುತ್ತದೆ. ಈ ಸಂದರ್ಭದಲ್ಲಿ ಗ್ರಾಮಸ್ಥರು ಜಿಲ್ಲಾಕೇಂದ್ರ ಹಾವೇರಿ ಮತ್ತು ಜಿಲ್ಲಾಡಳಿತ ಕಚೇರಿಗಾಗಿ 30 ಕಿ.ಮೀ ಸುತ್ತಿ ಬೇರೆ ಮಾರ್ಗವಾಗಿ ಬರುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಮಳೆಗಾಲದಲ್ಲಿ ಮುಳುಗುತ್ತೆ ಸೇತುವೆ...ಸಂಚಾರಕ್ಕೆ ಗ್ರಾಮಸ್ಥರ ಪರದಾಟ ಅಲ್ಲದೇ ನದಿ ದಡದಲ್ಲಿರುವ ಜಮೀನುಗಳಿಗೆ ಹೋಗಲು ರೈತರು ಪರದಾಡಬೇಕು. ಕೆಲವೊಮ್ಮೆ ತೆಪ್ಪದಲ್ಲಿ ಕುಳಿತು ಇನ್ನೊಂದು ದಡಕ್ಕೆ ಹೋಗಿ ಕೃಷಿ ಕಾರ್ಯಗಳನ್ನು ಮುಗಿಸಿ ಬರಬೇಕು. ಇನ್ನು ಕೃಷಿ ಉಪಕರಣಗಳನ್ನು ತೆಪ್ಪದಲ್ಲಿ ತಗೆದುಕೊಂಡು ಹೋಗುವ ದುಸ್ಸಾಹಸಕ್ಕೆ ಕೆಲ ರೈತರು ಪ್ರಯತ್ನಿಸಿ ವಿಫಲಲಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಈ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ.
ಆರಂಭದಲ್ಲಿ ಕಟ್ಟಿದ ಸೇತುವೆ ಕಂ ಬ್ಯಾರೇಜ್ ಚಿಕ್ಕದಾಗಿದೆ. ಮಳೆಗಾಲ ಬಂದರೆ ಸಾಕು ನೀರಿನಲ್ಲಿ ಮುಳುಗುತ್ತದೆ. ಇದರ ಬದಲು ಎತ್ತರದ ಸೇತುವೆ ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಅಂತಾರೆ ಗ್ರಾಮಸ್ಥರು.
ಇದನ್ನೂ ಓದಿ:ಕಾಫಿನಾಡಲ್ಲಿ ನಾಲ್ವರು ಅಕ್ರಮ ಬಾಂಗ್ಲಾ ವಲಸಿಗರು ಪತ್ತೆ; ಪೊಲೀಸರ ವಶಕ್ಕೆ
ವಿಚಿತ್ರ ಅಂದರೆ ಕಳಸೂರು ಬಳಿ ಇರುವ ಏತ ನೀರಾವರಿಯಿಂದ 30 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಆದರೆ, ಸ್ವತಃ ಕಳಸೂರು ಗ್ರಾಮಸ್ಥರೇ ಕುಡಿಯುವ ನೀರಿಲ್ಲದೇ ಪರದಾಡುವ ಪರಿಸ್ಥಿತಿಯೂ ಇದೆ. ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ, ವರದಾ ನದಿ ಸೇತುವೆ ಎತ್ತರ ಹೆಚ್ಚಳ ಮಾಡುವ ಜೊತೆಗೆ ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಸಲು ಮುಂದಾಗಬೇಕಿದೆ.