ರಾಣೆಬೆನ್ನೂರು: ಕೊರೊನಾ ಹಿನ್ನೆಲೆ ಅಂತರ ಜಿಲ್ಲಾ ಪ್ರವೇಶ ನಿರ್ಬಂಧ ಮಾಡಿದರೂ ಸಹ ಸಾರ್ವಜನಿಕರು ಅತಿಕ್ರಮಣ ಪ್ರವೇಶ ಮಾಡುತ್ತಿದ್ದಾರೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹರನಗಿರಿ ಬಳಿ ತುಂಗಭದ್ರಾ ನದಿಗೆ ಅಡ್ಡವಾಗಿ ಕಟ್ಟಿರುವ ಹರವಿ-ಹರನಗಿರಿ ಸೇತುವೆ ಬಂದ್ ಮಾಡಲಾಗಿದೆ. ಆದರೂ ಸಾರ್ವಜನಿಕರು ಸೇತುವೆಗೆ ಅಡ್ಡವಾಗಿ ಇರುವ ತಗ್ಗುಪ್ರದೇಶ ದಾಟಿ ರಾಣೆಬೆನ್ನೂರು ಗಡಿ ಪ್ರವೇಶ ಮಾಡುತ್ತಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಣೆಬೆನ್ನೂರ ತಾಲೂಕಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆ ಮತ್ತು ಸೇತುವೆಗಳನ್ನು ಬಂದ್ ಮಾಡಲಾಗಿದೆ. ಆದರೆ, ಹರವಿ ಬಳಿ ಇರುವ ಸೇತುವೆ ಮೂಲಕ ದಾವಣಗೆರೆ, ಬಳಾರಿ ಜಿಲ್ಲೆಯ ಜನರು ರಾಣೆಬೆನ್ನೂರು ತಾಲೂಕಿಗೆ ಪ್ರವೇಶ ಮಾಡುತ್ತಿದ್ದಾರೆ.
ಈ ಸೇತುವೆ ಬಳಿ ಚೆಕ್ ಪೋಸ್ಟ್ ಹಾಕಿದರು ಕೂಡ ಯಾವೊಬ್ಬ ಪೊಲೀಸ್ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ಸಹ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಇಲ್ಲಿನ ಅಕ್ಕಪಕ್ಕದ ಗ್ರಾಮದ ಜನರು ಯಾವುದೇ ಭಯವಿಲ್ಲದೆ ಸೇತುವೆ ದಾಟುತ್ತಿದ್ದಾರೆ ಎಂದು ಸ್ಥಳೀಯರ ಆರೋಪವಾಗಿದೆ.