ಹಾವೇರಿ:ಹಾವೇರಿಜಿಲ್ಲಾ ಮಠಾಧೀಶರ ಒಕ್ಕೂಟ ಸಿಎಂ ಬಸವರಾಜ ಬೊಮ್ಮಾಯಿ ಪರ ಅಭಿಮತ ವ್ಯಕ್ತಪಡಿಸಿದೆ. ಈ ಕುರಿತಂತೆ 10ಕ್ಕೂ ಅಧಿಕ ಮಠಾಧೀಶರು ಸಿಎಂ ಬೊಮ್ಮಾಯಿ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ನಡೆಸುತ್ತಿರುವ ಪೇಸಿಎಂ ಅಭಿಯಾನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೇ ಸಿಎಂ ಅಭಿಯಾನ ವೈಯಕ್ತಿಕವಾಗಿ ಒಬ್ಬ ಮುಖ್ಯಮಂತ್ರಿಯನ್ನು ಟಾರ್ಗೆಟ್ ಮಾಡಿಕೊಂಡು ಮಾಡಿದ ಹುನ್ನಾರ ಎಂದು ಮಠಾಧೀಶರ ಒಕ್ಕೂಟ ಆರೋಪಿಸಿದೆ.
ತಪ್ಪುಗಳಾದಾಗ ಕಾನೂನುಬದ್ಧವಾಗಿ ಏನು ಬೇಕಾಗಿತ್ತೋ ಅದನ್ನು ಮಾಡಿ ಅವರಿಗೆ ಬೇಕಾದ ಶಿಕ್ಷೆ ಕೊಟ್ಟು ಎಲ್ಲ ಜನರ ಹೃದಯ ಗೆಲ್ಲುವ ಕೆಲಸವನ್ನು ಎಲ್ಲ ಪಕ್ಷಗಳು ಮಾಡುತ್ತಿದ್ದವು. ಈಗ ದೊಡ್ಡ ದೊಡ್ಡ ಜ್ವಲಂತ ಸಮಸ್ಯೆಗಳನ್ನು ಬಿಟ್ಟು ಸಣ್ಣತನದ ವಿಚಾರಗಳನ್ನು ಇಟ್ಕೊಂಡು ರಾಜಕಾರಣ ಮಾಡೋದನ್ನು ನೋಡಿದರೆ, ನಾವು ಕಳಿಸಿದ ಚುನಾಯಿತ ಪ್ರತಿನಿಧಿಗಳು ಏನು ಮಾಡ್ತಿದ್ದಾರೆ ಅನ್ನೋ ವಿಚಾರ ಜನರಲ್ಲಿ ಬರ್ತಿದೆ ಎಂದು ಒಕ್ಕೂಟ ಬೇಸರ ವ್ಯಕ್ತಪಡಿಸಿದೆ.
ಮುತ್ಸದ್ದಿ ರಾಜಕಾರಣಿಗಳು ಸಣ್ಣತನಕ್ಕೆ ಇಳಿಯುತ್ತಿರೋದನ್ನು ನೋಡಿ ಸಮಾಜ ಅವಹೇಳನ ಮಾಡೋ ಸ್ಥಿತಿ ಬರಬಾರದು ಎಂದು ಒಕ್ಕೂಟ ಅಭಿಪ್ರಾಯಪಟ್ಟಿದೆ. ಸಣ್ಣ ವಿಚಾರಗಳನ್ನು ಬಿಟ್ಟು ಜ್ವಲಂತ ಸಮಸ್ಯೆಗಳ ಬಗ್ಗೆ ಗಮನಹರಿಸಿ ಅಂತಾ ಪ್ರತಿಪಕ್ಷಗಳಿಗೆ ಸ್ವಾಮೀಜಿಗಳು ಕಿವಿಮಾತು ಹೇಳಿದ್ದಾರೆ.