ಹಾವೇರಿ:ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಹಾವೇರಿಯಲ್ಲಿ ಚಿತ್ರಕಲಾ ರಚನಾ ಶಿಬಿರ ಆಯೋಜಿಸಲಾಗಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹುತಾತ್ಮ ಮೈಲಾರ ಮಹಾದೇವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ನಗರದ ವೀರಸೌಧದ ಆವರಣದಲ್ಲಿರುವ ಮೈಲಾರ ಮಹಾದೇವ ಸಾಂಸ್ಕೃತಿಕ ಭವನದಲ್ಲಿ ನಡೆದ ಎರಡು ದಿನಗಳ ದೇಶಭಕ್ತರ ಚಿತ್ರ ರಚನಾ ಶಿಬಿರಕ್ಕೆ ಶಾಸಕ ನೆಹರು ಓಲೇಕಾರ ಚಾಲನೆ ನೀಡಿದರು.
ಶಿಬಿರದಲ್ಲಿ ಜಿಲ್ಲೆಯ 11ಕ್ಕೂ ಅಧಿಕ ಚಿತ್ರಕಲಾವಿದರು ಪಾಲ್ಗೊಂಡು ತಮ್ಮ ಕಲೆಯನ್ನು ಅನಾವರಣಗೊಳಿಸಿದರು. ಸ್ವಾತಂತ್ರ ಹೋರಾಟದಲ್ಲಿ ಹಾವೇರಿ ಜಿಲ್ಲೆಯ ಹೋರಾಟಗಾರರ ಪಾತ್ರ ಕುರಿತ ಚಿತ್ರ ಶೀರ್ಷಿಕೆಯಲ್ಲಿ ಶಿಬಿರ ಆಯೋಜಿಸಲಾಗಿತ್ತು. ಹಾವೇರಿ ಜಿಲ್ಲೆಯ ಮೈಲಾರ ಮಹದೇವಪ್ಪ, ವೀರಯ್ಯ ಹಿರೇಮಠ, ತಿರಕ್ಕಪ್ಪ ಮಡಿವಾಳ, ಗಾಂಧೀಜಿ ಸೇರಿದಂತೆ ಹಲವರ ಚಿತ್ರಗಳು ಕಲಾವಿದರ ಕಲಾಕುಂಚದಲ್ಲಿ ಅರಳಿದವು. ಮೈಲಾರ ಮಹದೇವಪ್ಪ ಹೆಸರಿನ ಅಂಚೆಚೀಟಿ ಗಮನಸೆಳೆಯಿತು.