ಉತ್ತರಕನ್ನಡ/ಮಂಡ್ಯ/ಹಾವೇರಿ: ಉಕ್ರೇನ್ ಮತ್ತು ರಷ್ಯಾ ನಡುವೆ ಭೀಕರ ಯುದ್ಧ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ವೇಳೆ, ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ವಾಪಸ್ ಕರೆತನ್ನಿ ಎಂದು ಪೋಷಕರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ.
ಶಿರಸಿ:ಯುಕ್ರೇನ್‌ನ ಖಾರ್ಕೀವ್‌ನಲ್ಲಿ ಭಾರತೀಯರು ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವು ಕನ್ನಡಿಗರ ಜೊತೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನ ಸ್ನೇಹ ಫಕೀರಪ್ಪ ಹೊಸಮನಿ ಸಹ ಸಿಲುಕಿಕೊಂಡಿದ್ದಾರೆ. ಖಾರ್ಕಿವ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಸ್ನೇಹಾ ಈಗಾಗಲೇ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾಳೆ. ಖಾರ್ಕಿವ್ ನ್ಯಾಷನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ನಾಲ್ಕನೇ ವರ್ಷದ ಕೋರ್ಸ್ ಮಾಡುತ್ತಿರುವ ಇವರು ಗೆಳೆಯರ ಜೊತೆ ರೂಂ ಮಾಡಿಕೊಂಡು ವ್ಯಾಸಂಗ ಮಾಡುತ್ತಿದ್ದರು.
ಯುದ್ಧದ ಕಾರಣದಿಂದ ವಿದ್ಯಾರ್ಥಿಗಳಿರುವ ಬಿಲ್ಡಿಂಗ್‌ನಿಂದ ಹೊರಗೆ ತೆರಳಲು ಯೂನಿವರ್ಸಿಟಿ ಸೂಚಿಸಿದ್ದು, ಸ್ವಯಂ ರಕ್ಷಣೆಗಾಗಿ ಅಂಡರ್ ಗ್ರೌಂಡ್‌ಗೆ ತೆರಳಲು ತಿಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕಾರಣದಿಂದ ಸರಿಸುಮಾರು 200-300 ಕನ್ನಡಿಗರ ಜೊತೆ ಮೆಟ್ರೋ ಸಬ್ ವೇನಲ್ಲಿ ಸ್ನೇಹಾ ತಂಗಿದ್ದಾರೆ. ಕಟ್ಟಡಗಳ ಮೇಲೆ ಯಾವುದೇ ಕ್ಷಣದಲ್ಲಿಯೂ ದಾಳಿಯಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಸಬ್-ವೇನಲ್ಲಿ ತಂಗಿದ್ದಾರೆ ಎನ್ನಲಾಗಿದೆ. ವಿದ್ಯಾರ್ಥಿನಿ ಮುಂಡಗೋಡಿನ ತಮ್ಮ ಸಂಬಂಧಿಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
ತಮ್ಮೆಲ್ಲಾ ವಸ್ತುಗಳನ್ನು ತಾವು ನೆಲೆಸಿದ್ದ ರೂಂನಲ್ಲೇ ಬಿಟ್ಟು ಆಹಾರ ಹಾಗೂ ಅಗತ್ಯ ವಸ್ತುಗಳೊಂದಿಗೆ ಮೆಟ್ರೋ ಸಬ್ ವೇನಲ್ಲಿ ಉಳಿದುಕೊಂಡಿದ್ದಾರೆ. ನೂರಾರು ಮಂದಿ ವಿದೇಶಿಗರ ಜೊತೆ ಸಬ್ ವೇ ಹಾಗೂ ರೈಲಿನಲ್ಲಿ ಸಮಯ ಕಳೆಯುತ್ತಿದ್ದಾರೆ. ಭಾರತದ ರಾಯಭಾರಿ ಕಚೇರಿ ನಮ್ಮನ್ನು ಸಂಪರ್ಕಿಸಬೇಕಷ್ಟೇ. ಪರಿಸ್ಥಿತಿ ಹದಗೆಟ್ಟಿದ್ದರಿಂದ ಸಬ್ ವೇಗಳಲ್ಲಿ ಸುರಕ್ಷಿತವಾಗಿದ್ದೇವೆ. ಶೀಘ್ರದಲ್ಲಿ ಭಾರತಕ್ಕೆ ಹಿಂತಿರುಗಲು ವ್ಯವಸ್ಥೆಗಾಗಿ ಕಾಯುತ್ತಿದ್ದೇವೆ ಎಂದು ಸ್ನೇಹ ಹಾಗೂ ಇತರೆ ಕನ್ನಡಿಗರು ತಿಳಿಸಿದ್ದಾರೆ.
ಮಂಡ್ಯ: ಉಕ್ರೇನ್ನಲ್ಲಿ ಮಂಡ್ಯ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು ತಮ್ಮ ಮಕ್ಕಳ ಬಗ್ಗೆ ಪೋಷಕರು ಆತಂಕಗೊಂಡಿದ್ದಾರೆ. ಮಕ್ಕಳ ಜೊತೆ ಫೋನ್ನಲ್ಲಿ ಪೋಷಕರು ನಿರಂತರ ಸಂಪರ್ಕ ಹೊಂದಿದ್ದು, ಮಕ್ಕಳು ತಾವು ಸುರಕ್ಷಿತರಾಗಿದ್ದೇವೆಂದು ಪೋಷಕರಿಗೆ ತಿಳಿಸಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಇಬ್ಬರು ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡಲು ಕಳೆದ ವರ್ಷ ಉಕ್ರೇನ್ಗೆ ತೆರಳಿದ್ದರು. ಕೆ.ಆರ್.ಎಸ್ ಗ್ರಾಮದ ಜಯರಾಮೇಗೌಡರ ಪುತ್ರ ಮನೋಜ್ ಗೌಡ ಮತ್ತು ಕೆ.ಆರ್.ಎಸ್ ಗ್ರಾಮದ ರಾಜೇಶ್ ಖನ್ನಾರ ಪುತ್ರ ಗಾಯಿತ್ರಿ ಖನ್ನಾ ಈಗ ತಾವು ಸುರಕ್ಷಿತವಾಗಿರುವುದಾಗಿ ಹೇಳಿದ್ದಾರೆ. ಆದ್ರೆ ಪೋಷಕರು ಆತಂಕದಲ್ಲಿದ್ದು, ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ಕರೆತರುವಂತೆ ಭಾರತ ಮತ್ತು ಕರ್ನಾಟಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಹಾವೇರಿ: ರಾಣೆಬೆನ್ನೂರು ತಾಲೂಕಿನ 8 ವೈದ್ಯಕೀಯ ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾರೆ. ರಾಣೆಬೆನ್ನೂರು ನಗರದ ಐದು ಮಂದಿ, ಚಳಗೇರಿಯ ಇಬ್ಬರು ಮತ್ತು ಬ್ಯಾಡಗಿಯ ಓರ್ವ ವಿದ್ಯಾರ್ಥಿ ಉಕ್ರೇನ್ನಲ್ಲಿದ್ದಾರೆ. ಯುದ್ಧ ಆಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಆದ್ರೆ ತಾವು ಸುರಕ್ಷಿತವಾಗಿದ್ದೇವೆ ಎಂದು ಪೋಷಕರಲ್ಲಿ ತಿಳಿಸಿದ್ದಾರೆ.
ಸುಮನ್ ವೈಶಾಯರ್, ರಂಜಿತ ಕಲಕಟ್ಟಿ, ಅಮೀತ್ ವೈಶಾಯರ್, ನವೀನ ಗ್ಯಾನಗೌಡರ, ಜೈನಾತುಲ್, ವಸಂತಕುಮಾರ, ಶಿವಲಿಂಗಪ್ಪ ಮತ್ತು ಪ್ರವೀಣ ಅಜರೆಡ್ಡಿ ಅವರು ಉಕ್ರೇನ್ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು. ಪೋಷಕರು ಮಕ್ಕಳ ಜೊತೆ ವಿಡಿಯೋ ಕಾಲ್ ಮೂಲಕ ಪರಿಸ್ಥಿತಿ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾರೆ. ಕಾರ್ಕ್ಯೂ ಇಂಟರ್ ನ್ಯಾಶನಲ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಇನ್ನೂ ತಮ್ಮ ಮಕ್ಕಳನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರುವಂತೆ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಪೋಷಕರು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಉಕ್ರೇನ್: ಹಾಸ್ಟೆಲ್ ನೆಲಮಹಡಿ, ಬಂಕರ್ಗಳಲ್ಲಿ ರಕ್ಷಣೆ ಪಡೆದ ಬೆಳಗಾವಿಯ 7 ವಿದ್ಯಾರ್ಥಿಗಳು
ವಿದ್ಯಾರ್ಥಿ ಪ್ರವೀಣ ಉಕ್ರೇನ್ನಲ್ಲಿ ತಾನು ಇರುವ ಸ್ಥಳದಿಂದ ಅಲ್ಲಿಯ ಸಮಸ್ಯೆಗಳ ಬಗ್ಗೆ ಸೆಲ್ಫಿ ವಿಡಿಯೋ ಮಾಡಿ ಕಳುಹಿಸಿದ್ದಾರೆ. ಭಾರತೀಯ ರಾಯಭಾರಿ ಕಚೇರಿಯಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲವೆಂದು ಪ್ರವೀಣ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ರಾಣೆಬೆನ್ನೂರಿನಲ್ಲಿರುವ ಪ್ರವೀಣ ಅವರ ಮನೆಗೆ ರಾಣೆಬೆನ್ನೂರು ಶಾಸಕ ಅರುಣಕುಮಾರ್ ಪೂಜಾರ್ ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಕ್ರೇನ್ನಲ್ಲಿ ಸಿಲುಕಿರುವವರನ್ನ ಸುರಕ್ಷಿತವಾಗಿ ದೇಶಕ್ಕೆ ಕರೆತರಲಿದೆ ಎಂದು ಭರವಸೆ ನೀಡಿದರು. ಈ ಕುರಿತಂತೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಜೊತೆ ಮಾತನಾಡಿರುವುದಾಗಿ ಶಾಸಕರು ತಿಳಿಸಿದರು.