ರಾಣೇಬೆನ್ನೂರು(ಹಾವೇರಿ) :ಸಾರ್ವಜನಿಕರ, ಸರ್ಕಾರದ ಕೆಲಸ ಮಾಡುವ ಗ್ರಾಮ ಪಂಚಾಯತ್‌ಗೆ ಸ್ವಂತ ಕಟ್ಟಡವಿದ್ದರೂ ಇನ್ನೂ ಕೂಡ ಗೋದಾಮಿನಲ್ಲೇ ಕೆಲಸ ಮಾಡುವ ಸ್ಥಿತಿ ಅಧಿಕಾರಿಗಳಿಗೆ ಬಂದಿದೆ.
ಸರ್ಕಾರಿ ಕಟ್ಟಡವಿದ್ದರೂ ಗೋದಾಮಿನಲ್ಲಿ ಮುಂದುವರೆದ ಪಂಚಾಯತ್ ಕಾರ್ಯ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಸೋಮಲಾಪುರ ಗ್ರಾಮದಲ್ಲಿರುವ ಗ್ರಾಮ ಪಂಚಾಯತ್ ಕೆಲಸ ಕಳೆದ ನಾಲ್ಕು ವರ್ಷಗಳಿಂದ ಗೋದಾಮಿನಲ್ಲೇ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ಇದ್ದ ಸಮಯದಲ್ಲಿ ರಾಣೇಬೆನ್ನೂರು ತಾಲೂಕಿನಲ್ಲಿ ಹೊಸದಾಗಿ ಐದು ಗ್ರಾಮ ಪಂಚಾಯತ್ ಮಾಡಲು ಅನುಮೋದನೆ ನೀಡಿತ್ತು. ಇದರಲ್ಲಿ ಸೋಮಲಾಪುರ ಗ್ರಾಮ ಪಂಚಾಯತ್ ಕೂಡ ಒಂದಾಗಿದೆ. ಈಗಾಗಲೇ ನಾಲ್ಕು ಗ್ರಾಮ ಪಂಚಾಯತ್ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಸೋಮಲಾಪುರ ಗ್ರಾಮ ಪಂಚಾಯತ್ ಹೊಸ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭವಾಗಿ ಐದು ವರ್ಷವಾಗಿದೆ. ಅದು ಇತ್ತೀಚೆಗೆ ಅಂತಿಮ ಹಂತಕ್ಕೆ ತಲುಪಿದೆ.
₹40 ಲಕ್ಷ ವೆಚ್ಚದ ಕಟ್ಟಡಕ್ಕೆ ಉದ್ಘಾಟನಾ ಭಾಗ್ಯವಿಲ್ಲ:ಸೋಮಲಾಪುರ ಗ್ರಾಮ ಪಂಚಾಯತ್ ಅಸ್ತಿತ್ವಕ್ಕೆ ಬಂದ ತಕ್ಷಣವೇ ಹೊಸ ಕಟ್ಟಡ ನಿರ್ಮಾಣ ಮಾಡಲು ಶುರು ಮಾಡಲಾಗಿದೆ. ಇದಕ್ಕಾಗಿ ನೆರೇಗಾ ವತಿಯಿಂದ ಸುಮಾರು 16 ಲಕ್ಷ ಮತ್ತು 14 ಹಣಕಾಸಿನಲ್ಲಿ 20 ಲಕ್ಷ ವ್ಯಯಿಸಿ ಅಂದಾಜು 40 ಲಕ್ಷದ ಕಟ್ಟಡ ಕಟ್ಟಲಾಗಿದೆ. ಸದ್ಯ ಎಲ್ಲಾ ಕಾಮಗಾರಿ ಮುಗಿದಿದೆ. ಆದರೆ, ಉದ್ಘಾಟನಾ ಭಾಗ್ಯಕ್ಕೆ ರಾಜಕೀಯ ಬಿಕ್ಕಟ್ಟು ಎದುರಾಗಿದೆ.
ಕಳಪೆ ಕಾಮಗಾರಿ ಮಾತುಗಳು ಜೋರು :ಪ್ರಸ್ತುತ ಗ್ರಾಮ ಪಂಚಾಯತ್ ಹೊಸ ಕಟ್ಟಡ ಕಾಮಗಾರಿ ಸಂಪೂರ್ಣ ಮುಗಿದಿದೆ. ಆದರೆ, ಗ್ರಾಮಸ್ಥರು ಈ ಕಟ್ಟಡ ಕಳಪೆ ಕಾಮಗಾರಿಯಿಂದ ಕೂಡಿದ್ದು, ಸರಿಯಾದ ರೀತಿ ನಿರ್ವಹಣೆ ಮಾಡಿಲ್ಲ. ಹೀಗಾಗಿ ಇದು ಹೆಚ್ಚು ದಿನ ಬಾಳಿಕೆ ಬರುವುದೇ ಅನುಮಾನ ಎನ್ನುತ್ತಾರೆ.
ಸರ್ಕಾರದ ಕೆಲಸವನ್ನು ಸ್ವಂತ ಕಟ್ಟಡದಲ್ಲಿ ನಿರ್ವಹಣೆ ಮಾಡಬೇಕಾದ ಗ್ರಾಮ ಪಂಚಾಯತ್ ಇಂದಿಗೂ ಸರ್ಕಾರಿ ಗೋದಾಮಿನಲ್ಲಿ ಕೆಲಸ ನಿರ್ವಹಿಸುತ್ತಿದೆ. ಇತ್ತ ರೈತರು ಬೆಳೆದ ಬೆಳೆಗಳನ್ನು ಸಂರಕ್ಷಿಸುವ ಗೋದಾಮಿನಲ್ಲಿ ಗ್ರಾಮ ಪಂಚಾಯತ್ ಕಾರ್ಯ ನಿರ್ವಹಿಸುತ್ತಿರುವುದು ಕೂಡ ತಪ್ಪು ಎನ್ನಲಾಗಿದೆ.