ಹಾವೇರಿ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಆಯೋಜಿಸಿರುವ ಸತ್ಯಾಗ್ರಹಕ್ಕೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಚಾಲನೆ ನೀಡಿದರು. ಶಿಗ್ಗಾಂವಿ ಪಟ್ಟಣದ ಸವಣೂರು ರಸ್ತೆಯಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದ ಎದುರು ಆಯೋಜಿಸಿರುವ ಸತ್ಯಾಗ್ರಹಕ್ಕೆ ಶಾಲಾ ವಿದ್ಯಾರ್ಥಿಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸ್ವಾಮೀಜಿ ಚಾಲನೆ ನೀಡಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ನಾಲ್ಕು ಬಾರಿ ಮಾತು ಕೊಟ್ಟು ತಪ್ಪಿದ್ದಾರೆ. ನಾಲ್ಕನೇ ಬಾರಿ ಮಾತು ತಪ್ಪಿದರೆ ಸಿಎಂ ಮನೆ ಮುಂದೆ ಸತ್ಯಾಗ್ರಹ ಮಾಡ್ತೇವೆ ಅಂತಾ ಹೇಳಿದ್ವಿ. ಈಗ ಮಾತು ತಪ್ಪಿದ್ದರಿಂದ ಸತ್ಯಾಗ್ರಹ ಮಾಡ್ತಿದ್ದೇವೆ. ಮೀಸಲಾತಿ ಹೋರಾಟ ಈಗಾಗಲೆ ಬಹುದೊಡ್ಡ ಯಶಸ್ಸು ಕಂಡಿದೆ. ನಾವು ಬಹಳ ಮುಗ್ದ ಜನರು. ನಮ್ಮ ಜನರನ್ನು ತೋರಿಸಿ ಬೆಂಗಳೂರಿನಲ್ಲಿರುವ ಶೇಕಡಾ ಎರಡರಷ್ಟು ಜನರು ಅಧಿಕಾರ ಅನುಭವಿಸಿದರು.
ಯಡಿಯೂರಪ್ಪ ಅವರು ಮೀಸಲಾತಿ ಕೊಡ್ತೀನಿ ವೋಟು ಕೊಡಿ ಅಂದರು. ವೋಟು ಪಡೆದು ಅವರು ಅಧಿಕಾರಕ್ಕೆ ಬಂದರು. ಯಡಿಯೂರಪ್ಪ ಅವರನ್ನು ಲಿಂಗಾಯತ ನಾಯಕರು ಅಂತಾ ನಂಬಿದ್ವಿ. ಅವರು ಮೀಸಲಾತಿ ಕೊಡಬಹುದು ಅನ್ನೋ ಕಾರಣಕ್ಕೆ ದೊಡ್ಡ ಮಟ್ಟದಲ್ಲಿ ಪಾದಯಾತ್ರೆ ಮಾಡಿದ್ವಿ ಆದರೆ ಕೊಡಲಿಲ್ಲ ಎಂದು ಸ್ವಾಮೀಜಿ ಹೇಳಿದರು.
ಮಾತು ತಪ್ಪಿದ ಬೊಮ್ಮಾಯಿ:ಬೊಮ್ಮಾಯಿಯವರು ಅಧಿಕಾರಕ್ಕೆ ಬಂದಾಗ ನಮಗೆ ಖುಷಿಯಾಯಿತು. ಸೋಮಣ್ಣ ಬೇವಿನಮರದ, ಮಂಜುನಾಥ ಕುನ್ನೂರರು ತ್ಯಾಗ ಮಾಡಿ ಬೊಮ್ಮಾಯಿ ಅವರಿಗೆ ಅಧಿಕಾರ ಕೊಟ್ಟರು. ನಮ್ಮ ಹೋರಾಟಕ್ಕೆ ಅರಮನೆ ಮೈದಾನ ಕೊಡಿಸಿದವರು ಬೊಮ್ಮಾಯಿ ಸಾಹೇಬ್ರು. ಬೊಮ್ಮಾಯಿಯವರು ಸಿಎಂ ಆದ್ಮೇಲೆ ಕರೆದು ಮೀಸಲಾತಿ ಕೊಡೋಕೆ ಮೂರು ತಿಂಗಳು ಸಮಯ ಕೇಳಿದರು.
ನಮ್ಮ ಸಮಾಜದ ನಾಲ್ವರ ಮೇಲೆ ಕೈಯಿಟ್ಟು ಮೀಸಲಾತಿ ಕೊಟ್ಟು ಪುಣ್ಯ ಕಟ್ಟಿಕೊಳ್ತೀನಿ ಅಂತಾ ಬೊಮ್ಮಾಯಿ ಮಾತು ಕೊಟ್ಟರು. ಸಿಎಂ ಬೊಮ್ಮಾಯಿ ಮೀಸಲಾತಿ ಕೊಟ್ಟೇ ಕೊಡ್ತಾರೆ ಅಂತಾ ನಮ್ಮ ಬಸನಗೌಡ ಪಾಟೀಲ ಯತ್ನಾಳರು ಹೇಳಿದ್ದರು. ನಮ್ಮ ಮನೆ ಮುಂದೆ ಕುಳಿತರೆ ಮುಜುಗುರ ಆಗುತ್ತದೆ ಎಂದು ಸಿಎಂ ಬೊಮ್ಮಾಯಿಯವರು ಈ ಹಿಂದೆ ಹೇಳಿದ್ಮೇಲೆ ಸತ್ಯಾಗ್ರಹ ಮುಂದೆ ಹಾಕಿದ್ವಿ. ಆಗ ಮತ್ತೆ ಎರಡು ತಿಂಗಳು ಸಮಯ ಕೇಳಿದರು ಎಂದು ತಿಳಿಸಿದರು.