ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ್ ಪ್ರಸನ್ನಕುಮಾರ್ ಹಾವೇರಿ: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕೆಜೆಪಿಗೆ ಬಂದ ಮೇಲೆ ಪಕ್ಷ ಶೈನ್ ಆಗಿದ್ದು ನಿಜ. ಆದರೆ ಅವರಿಗೆ ಸ್ಟ್ರಾಟಜಿ ಹೇಳಿಕೊಟ್ಟಿದ್ದು ನಾನೇ ಎಂದು ಕೆಜೆಪಿ ರಾಜ್ಯಾಧ್ಯಕ್ಷ ಪದ್ಮನಾಭ್ ಪ್ರಸನ್ನಕುಮಾರ್ ತಿಳಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಕಳೆದೆರಡು ದಿನಗಳಿಂದ ಯಡಿಯೂರಪ್ಪ ನಮ್ಮ ಸಂಪರ್ಕದಲ್ಲಿದ್ದಾರೆ. ನಮ್ಮ ಪಕ್ಷಕ್ಕೆ ಸದ್ಯ ಬಿಎಸ್ವೈ ಅವಶ್ಯಕತೆ ಇಲ್ಲ. ಯಡಿಯೂರಪ್ಪ ಈಗ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುತ್ತಿದ್ದಾರೆ. ಇದನ್ನು ಅವರಿಗೆ ನಾನು ಯಾವಾಗಲೋ ಹೇಳಿದ್ದೆ. ಈಗಲಾದರೂ ಯಡಿಯೂರಪ್ಪ ನೆಮ್ಮದಿಯ ಜೀವನ ಕಳೆಯಲಿ ಹಾಗೂ ನಮ್ಮ ಪಕ್ಷಕ್ಕೆ ಹಾರೈಸಲಿ ಎಂದು ಪದ್ಮನಾಭ್ ತಿಳಿಸಿದರು.
ರಾಷ್ಟ್ರೀಯ ಪಕ್ಷಗಳನ್ನು ರಾಜ್ಯದಿಂದ ಹೊಡೆದೋಡಿಸಬೇಕು. ಪ್ರಾದೇಶಿಕ ಪಕ್ಷದ ನಮ್ಮತನವನ್ನು ಉಳಿಸಿಕೊಳ್ಳಬೇಕು ಎಂದು 2008 ರಿಂದ ಕೆಜೆಪಿ ಹೋರಾಟ ಮಾಡುತ್ತಿದೆ. 2014 ರಲ್ಲಿ ಸಹ ಉತ್ತಮ ಕಾರ್ಯ ಮಾಡಿದ್ದೇವೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಪಾಂಡಿಚೇರಿ, ಕೇರಳ ಮತ್ತು ತೆಲಂಗಾಣದಲ್ಲಿ ನಮ್ಮ ರಾಜ್ಯ ಕರ್ನಾಟಕ ಬಿಟ್ಟರೆ ಉಳಿದ ಕಡೆ ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ ದಿನೇ ದಿನೆ ಅಧಿಕವಾಗುತ್ತಿದೆ. ಬಿಜೆಪಿ ಮತ್ತು ಕಾಂಗ್ರೆಸ್‌ಗೆ ನಮ್ಮ ರಾಜ್ಯ ಕರ್ನಾಟಕ ದೊಡ್ಡ ಹುಲ್ಲುಗಾವಲಾಗಿ ಕಾಣುತ್ತಿದೆ ಎಂದು ಆರೋಪಿಸಿದರು.
ಇವೆರಡು ಪಕ್ಷಗಳ ಹೈಕಮಾಂಡ್ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ದೆಹಲಿ ದೆಹಲಿ ಎನ್ನುವಂತಾಗಿದೆ. ಬಿಜೆಪಿ ಸ್ಥಳೀಯ ನಾಯಕರಿಗೆ ಈಗಾಗಲೇ ಭಯ ಶುರುವಾಗಿದೆ. ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಬಂದರೂ ಇವರ ಮೀಟರ್ 60 ರಿಂದ 70 ರ ಮೇಲೆ ಹೋಗುತ್ತಿಲ್ಲ ಎಂದರು.
ಅಮಿತ್ ಷಾ ಬಂದರೂ ಜನ ಸೇರುತ್ತಿಲ್ಲ:ಪ್ರಧಾನಿ ಮೋದಿಯಾದಿಯಾಗಿ ನಡ್ಡಾ ಮತ್ತು ಅಮಿತ್ ಷಾ ಬಂದರೂ ಜನ ಸೇರುತ್ತಿಲ್ಲ. ರಾಜ್ಯದಿಂದ ಕೇಂದ್ರಕ್ಕೆ ವರ್ಷಕ್ಕೆ ಎರಡು ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಕಟ್ಟುತ್ತೇವೆ. ಆದರೆ ಕೇಂದ್ರ ಸರ್ಕಾರ ನಮಗೆ ನೀಡುತ್ತಿರುವುದು ಅದರ ಪ್ರತಿಶತ 20 ಅಥವಾ 30 ರಷ್ಟು ಮಾತ್ರ ಎಂದು ಆರೋಪಿಸಿದರು.
ಜಿಎಸ್‌ಟಿ ಹಣ ನಮಗೆ ನೀಡಿ ನಮ್ಮ ರಾಜ್ಯವನ್ನ ನಾವು ನಿಭಾಯಿಸುತ್ತೇವೆ. ಬೊಮ್ಮಾಯಿ ಸರ್ಕಾರ ನಿರುದ್ಯೋಗ ಮತ್ತು ರೈತರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಹಾವೇರಿಯಲ್ಲಿ ನಮ್ಮ ಪಕ್ಷ ಉದಯವಾಯಿತು. 2013 ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಹೀನಾಯ ಸೋಲು ಕಾಣಲು ಕೆಜೆಪಿ ಕಾರಣ ಎಂದು ತಿಳಿಸಿದರು.
ಮುಟ್ಟುಗೋಲು ಹಾಕಿಕೊಳ್ಳಬೇಕು: ರಾಜ್ಯದ ಮಣ್ಣು ಲೂಟಿ ಮಾಡಿ ಜನಾರ್ಧನ ರೆಡ್ಡಿ ಜನರನ್ನ ಹಾಳು ಮಾಡಲು ಹೊರಟಿದ್ದಾರೆ. ರಾಜ್ಯದ ಮಣ್ಣಿನಿಂದ ಸುಮಾರು 4 ಲಕ್ಷ 50 ಸಾವಿರ ಕೋಟಿ ರೂಪಾಯಿ ಆದಾಯ ಪಡೆದಿದ್ದಾರೆ ಎಂದು ಆರೋಪಿಸಿದರು. ಅಮಿತ್ ಶಾ ಅವರೇ ಜನಾರ್ಧನ ರೆಡ್ಡಿ ಬಂದಿಸಿ ಅವರು ಲೂಟಿ ಮಾಡಿರುವ ಹಣವನ್ನ ಮುಟ್ಟುಗೋಲು ಹಾಕಿಕೊಳ್ಳಬೇಕು. ಅವರು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನೋಡಿಕೊಳ್ಳಬೇಕು. ಜನಾರ್ಧನ ರೆಡ್ಡಿ ಬಸವಣ್ಣನ ಮೇಲೆ ಆಣೆ ಮಾಡಿದ್ದೀರಿ. ನಿಮಗೆ ನಾಚಿಕೆಯಾಗಬೇಕು ಎಂದು ಪದ್ಮನಾಭ್ ಆಕ್ರೋಶ ವ್ಯಕ್ತಪಡಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಪೂರ್ವ ತಯಾರಿಯಾಗಿ ನವೆಂಬರ್ ಒಂದರಿಂದ ಬಸವಕಲ್ಯಾಣದಿಂದ ಪ್ರಚಾರ ಆರಂಭಿಸಲಾಗುವುದು. ಈಗಾಗಲೇ ಚಾಮರಾಜನಗರ, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಉತ್ತರಕರ್ನಾಟಕ, ಹೈದರಾಬಾದ್ ಕರ್ನಾಟಕ ಮುಗಿಸಿ ನೆಚ್ಚಿನ ತಾಣ ಹಾವೇರಿಗೆ ಬಂದಿದ್ದೇನೆ ಎಂದು ತಿಳಿಸಿದರು.ರಾಜ್ಯದಲ್ಲಿ 224 ಕ್ಷೇತ್ರಗಳಲ್ಲಿ ನಾವು ಸ್ಪರ್ಧಿಸುತ್ತಿದ್ದು, ಅದರಲ್ಲಿ ಕನಿಷ್ಟ 50 ಕ್ಷೇತ್ರದಲ್ಲಿ ಜಯಭೇರಿ ಬಾರಿಸುತ್ತೇವೆ. ರಾಜ್ಯದಲ್ಲಿ ಸರ್ಕಾರ ರಚಿಸಲು ನಿರ್ಣಾಯಕ ಪಾತ್ರವನ್ನ ನಾವು ವಹಿಸಲಿದ್ದೇವೆ ಎಂಬ ಆತ್ಮವಿಶ್ವಾಸವನ್ನ ಪದ್ಮನಾಭ್ ವ್ಯಕ್ತಪಡಿಸಿದರು.
ಇದನ್ನೂ ಓದಿ :ಪ. ಜಾತಿ, ಪಂಗಡದ ಮಕ್ಕಳು ಶುಲ್ಕ ಪಾವತಿಸಿಲ್ಲವೆಂದು ಹಾಲ್ ಟಿಕೆಟ್ ನಿರಾಕರಿಸುವಂತಿಲ್ಲ- ಸೂಚನೆ