ಕರ್ನಾಟಕ

karnataka

ETV Bharat / state

ಶಾಲೆಯಲ್ಲಿ ತಂದೆ ತಾಯಿ ಪಾದ ಪೂಜೆ ಮಾಡಿದ ಮಕ್ಕಳು - Pada Pooja of Father and Mother is a special event

ಹಾವೇರಿಯ ರಟ್ಟಿಹಳ್ಳಿ ತಾಲೂಕಿನ ಕುಡಪಲಿ ಗ್ರಾಮದ ಶಾಲೆಯಲ್ಲಿ ಮಕ್ಕಳು ತಮ್ಮ ತಮ್ಮ ತಂದೆ ತಾಯಿಯ ಜೊತೆಗೆ ಶಿಕ್ಷಕರ ಪಾದ ಪೂಜೆ ಮಾಡಿ ಗೌರವ ಅರ್ಪಿಸಿದ್ದಾರೆ.

pada-pooje-
ಪಾದ ಪೂಜೆ

By

Published : Feb 25, 2023, 1:36 PM IST

Updated : Feb 25, 2023, 1:58 PM IST

ತಂದೆ ತಾಯಿ, ಶಿಕ್ಷಕರ ಪಾದ ಪೂಜೆ ಮಾಡಿದ ಮಕ್ಕಳು

ಹಾವೇರಿ:ಮಕ್ಕಳ ಪಾಲಿಗೆ ನಿಜವಾದ ದೇವರು ಹೆತ್ತ ತಂದೆ ತಾಯಿಗಳು. ಆದರೆ ಇತ್ತಿಚೀನ ದಿನಗಳಲ್ಲಿನ ವಿಭಕ್ತ ಕುಟುಂಬದಲ್ಲಿ ತಂದೆ ತಾಯಿ ಸ್ಥಾನ ಗೌಣವಾಗುತ್ತಿದೆ. ಆಧುನೀಕರಣ ಜಾಗತೀಕರಣ ಮತ್ತು ನಗರೀಕರಣದ ಈ ದಿನಗಳಲ್ಲಿ ಹೆತ್ತವರ ಮೇಲೆ ಮಕ್ಕಳ ಗೌರವ ಕಡಿಮೆಯಾಗುತ್ತಿದೆ. ಪೂಜ್ಯನೀಯವಾಗಿ ಕಾಣಬೇಕಾದ ಈ ಜೀವಗಳನ್ನು ಸ್ವಂತ ಮಕ್ಕಳೇ ವೃದ್ದಾಶ್ರಮಕ್ಕೆ ತಳ್ಳುತ್ತಿರುವುದು ನಿಜಕ್ಕೂ ಆಘಾತಕಾರಿ.

ಮನೆಯಿಂದ ಹೊರಗೆ ತಳ್ಳಲ್ಪಟ್ಟ ಎಷ್ಟೊ ತಂದೆ ತಾಯಿಗಳು ವೃದ್ಧಾಶ್ರಮದಲ್ಲಿ ಅನಾಥಾಶ್ರಮದಲ್ಲಿ ಕಾಲ ತಳ್ಳುತ್ತಿರುವ ಉದಾಹರಣೆಗಳು ಈ ದಿನಗಳಲ್ಲಿ ಸಾಕಷ್ಟು ಕಾಣುತ್ತವೆ. ಮಕ್ಕಳಿಗೆ ತಂದೆ ತಾಯಿಯಲ್ಲಿ ಪೂಜ್ಯನೀಯ ಭಾವನೆಗಳಿಗೆ ಧಕ್ಕೆಯಾಗುತ್ತಿರುವುದನ್ನು ಮನಗಂಡ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಕುಡಪಲಿ ಗ್ರಾಮದ ಶಾಲಾ ಸಿಬ್ಬಂದಿ ವಿಶಿಷ್ಟ ಕಾರ್ಯಕ್ರಮ ಆಯೋಜಿಸುವ ಮೂಲಕ ಗಮನ ಸೆಳೆದಿದ್ದಾರೆ.

ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆ ಮತ್ತು ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಸಿಬ್ಬಂದಿ ಶಾಲೆಯಲ್ಲಿ ತಂದೆ ತಾಯಿಯರ ಪಾದಪೂಜೆ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಶಾಲೆಯಲ್ಲಿ ಕಲಿತ ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಪ್ರಯುಕ್ತ ನಡೆದ ಸರಸ್ವತಿ ಪೂಜೆಯ ಜೊತೆಜೊತೆಗೆ ಶಾಲೆಯಲ್ಲಿ ತಂದೆ ತಾಯಿಯರ ಪಾದಪೂಜೆ ಆಯೋಜನೆ ಮಾಡಲಾಗಿತ್ತು.

ಶಾಲೆಯಲ್ಲಿ ಒಟ್ಟು 340 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಅದರಲ್ಲಿ ಏಳನೇ ತರಗತಿಯ ಮಕ್ಕಳ 50ಕ್ಕೂ ಅಧಿಕ ತಂದೆ ತಾಯಿಯರಿಗೆ ಮಕ್ಕಳು ಪಾದಪೂಜೆ ಮಾಡಿದರು. ಪಾದಪೂಜೆ ಕಾರ್ಯಕ್ರಮ ಹಿನ್ನೆಲೆಯಲ್ಲಿ ತಂದೆ ತಾಯಿಯರು ಹೊಸ ಹೊಸ ಬಟ್ಟೆ ತೊಟ್ಟು ಶಾಲೆಗೆ ಆಗಮಿಸಿದ್ದರು. ಶಾಲೆಯ ಮಕ್ಕಳು ಸಹ ಹೊಸ ಹೊಸ ಉಡುಗೆ ತೊಟ್ಟು ಹಬ್ಬದ ಆಚರಣೆ ರೀತಿಯಲ್ಲಿ ಶಾಲೆಗೆ ಆಗಮಿಸಿದ್ದರು. ಶಾಲೆಯ ಮೈದಾನದಲ್ಲಿ ಎಲ್ಲಾ ಮಕ್ಕಳ ತಂದೆ ತಾಯಿಗಳನ್ನು ಕುರ್ಚಿಗಳ ಮೇಲೆ ಸಾಲಾಗಿ ಕೂರಿಸಿ ಮಕ್ಕಳು ತಮ್ಮ ತಮ್ಮ ತಂದೆ ತಾಯಿಯರ ಪಾದ ಪೂಜೆ ಮಾಡಿದರು. ತಂದೆ ತಾಯಿಯರ ಕೈಗೆ ಹೂವಿನಿಂದ ಕಂಕಣ ಕಟ್ಟಿ, ತಟ್ಟೆಯಲ್ಲಿ ತಂದೆ ತಾಯಿಯರ ಪಾದಗಳನ್ನಿರಿಸಿ ತೊಳೆದು ತಂದೆ ತಾಯಿಯರ ಪಾದಗಳಿಗೆ ಪೂಜೆ ಸಲ್ಲಿಸಿದರು.

ತಂದೆ- ತಾಯಿಗಳ ಜತೆ ಜತೆಗೆ ಶಿಕ್ಷಕರಿಗೂ ಪಾದ ಪೂಜೆ:ತಂದೆ ತಾಯಿ ಮೊದಲ ದೇವರುಗಳಾದರೆ ಅಕ್ಷರ ಕಲಿಸಿದ ಶಿಕ್ಷಕ ಶಿಕ್ಷಕಿಯರೂ ದೇವರು ಸಮಾನ. ಹೀಗಾಗಿ ತಂದೆ ತಾಯಿಯರಿಗೆ ಮಾತ್ರವಲ್ಲ ಎರಡೂ ಶಾಲೆಗಳ ಹದಿನಾಲ್ಕು ಜನ ಶಿಕ್ಷಕ ಶಿಕ್ಷಕಿಯರಿಗೂ ಏಳನೇ ತರಗತಿ ವಿದ್ಯಾರ್ಥಿಗಳು ಪಾದ ಪೂಜೆ ನೆರವೇರಿಸಿದರು. ಶಾಲೆಯ ವಿದ್ಯಾರ್ಥಿಗಳು ಪಾದ ಪೂಜೆಗೆ ಬೇಕಾದ ಪೂಜಾ ಸಾಮಗ್ರಿಗಳನ್ನು ಮನೆಯಿಂದ ತಂದು, ತಂದೆ ತಾಯಿಯರ ಪಾದ ಪೂಜೆ ನೆರವೇರಿಸಿದರು. ಅದರ ಜೊತೆ ಜೊತೆಗೆ ಶಿಕ್ಷಕ ಶಿಕ್ಷಕಿಯರ ಪಾದಪೂಜೆಯನ್ನು ನೆರವೇರಿಸಿ ಸಂಭ್ರಮಿಸಿದರು.

ಶಿಕ್ಷಕರ ಆನಂದಕ್ಕೆ ಪಾರವೇ ಇರಲಿಲ್ಲ:ತಂದೆ ತಾಯಿಯರ ಪಾದ ಪೂಜೆಯಲ್ಲಿ ಪಾಲ್ಗೊಂಡ ಮಕ್ಕಳ ಮುಖದಲ್ಲಿ ಧನ್ಯತಾ ಭಾವ ಮೂಡಿತ್ತು. ಪಾದಪೂಜೆ ಮಾಡಿಸಿಕೊಂಡ ತಂದೆ ತಾಯಿ
ಮತ್ತು ಶಿಕ್ಷಕರ ಆನಂದಕ್ಕೆ ಪಾರವೇ ಇರಲಿಲ್ಲಾ. ಮಕ್ಕಳಿಂದ ಪಾದ ಪೂಜೆಗೆ ಒಳಗಾದ ತಂದೆ ತಾಯಿಯರು ಮಕ್ಕಳ ಪ್ರೀತಿ ಕಂಡು ಸಂತಸ ವ್ಯಕ್ತಪಡಿಸಿದರು. ಮಕ್ಕಳಲ್ಲಿ ಬಾಲ್ಯದಲ್ಲಿಯೇ ತಂದೆ ತಾಯಿಯರ ಬಗ್ಗೆ ಪೂಜ್ಯನೀಯ ಭಾವನೆ ಮೂಡಿಸಲು ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಶಾಲೆಯ ಸಿಬ್ಬಂದಿಗೆ ಅಡಳಿತ ಮಂಡಳಿಯ ಸದಸ್ಯರಿಗೆ ವಿಶೇಷ ಅಭಿನಂದನೆ ಸಲ್ಲಿಸಿದರು‌.

ಪ್ರಸ್ತುತ ದಿನಗಳಲ್ಲಿ ಮಕ್ಕಳಿಗೆ ಶಾಲೆ ಟ್ಯೂಷನ್ ಪಠ್ಯ ಪಠ್ಯೇತರ ಚಟುವಟಿಕೆಗಳಲ್ಲಿ ಈ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲದಂತಾಗಿದೆ. ಆದರೆ ಶಾಲೆ ಇವೆಲ್ಲಒತ್ತಡಗಳ ನಡುವೆ ಪಾದಪೂಜೆ ಕಾರ್ಯಕ್ರಮ ಆಯೋಜಿಸಿರುವುದು ಪೋಷಕರಿಗೆ ಸಂತಸ ತಂದಿದೆ. ಇತ್ತೀಚಿನ ದಿನಗಳಲ್ಲಿ ಕೆಲವು ಮಕ್ಕಳು ವಯಸ್ಸಾದ ಹೆತ್ತ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆಕಳಿಸುವುದು, ಮನೆ ಬಿಟ್ಟು ಹೊರಗೆ ಹಾಕುವುದು ಸೇರಿದಂತೆ ಹೆತ್ತವರ ಮನಸ್ಸು ನೋಯಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಭಾವನೆ ದೂರ ಮಾಡಲು ಮಕ್ಕಳಿಗೆ ಬಾಲ್ಯದಲ್ಲಿಯೇ ತಂದೆ ತಾಯಿಯರ ಬಗ್ಗೆ ಪೂಜ್ಯನೀಯ ಭಾವನೆ, ಗೌರವ ಮೂಡುವಂತೆ ಮಾಡಲು ನಮ್ಮ ಶಾಲೆಯಲ್ಲಿ ಇಂತಹ ಅಪರೂಪದ ಮತ್ತು ವಿಶಿಷ್ಟ ಕಾರ್ಯಕ್ರಮ
ಆಯೋಜನೆ ಮಾಡಿದ್ದೇವೆ.

ಏಳನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಪ್ರಯುಕ್ತ ಆಯೋಜಿಸಿರುವ ಸರಸ್ವತಿ ಪೂಜೆಯ ಜೊತೆಗೆ ತಂದೆ ತಾಯಿಯರ ಪಾದ ಪೂಜೆ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಮಕ್ಕಳು ತಮ್ಮ ತಂದೆ ತಾಯಿಗಳಿಗೆ ಪಾದ ಪೂಜೆ ಮಾಡಿ ಅವರೆ ನಮ್ಮ ಸಾಕ್ಷಾತ್ ದೇವರು ಎನ್ನುವಂತೆ ತಂದೆ ತಾಯಿಯರನ್ನು ಖುಷಿಪಡಿಸಿದ್ದಾರೆ ಎನ್ನುತ್ತಾರೆ ಶಾಲೆಯ ಶಿಕ್ಷಕರು.

ಇದನ್ನೂ ಓದಿ:ಕಲಬುರಗಿಯಲ್ಲಿ ಕಳೆಕಟ್ಟಿದ ಕಲ್ಯಾಣ ಕರ್ನಾಟಕ ಉತ್ಸವ: ವಿಪಿ ಗಾಯನಕ್ಕೆ ಮನಸೋತ ಜನ

Last Updated : Feb 25, 2023, 1:58 PM IST

ABOUT THE AUTHOR

...view details