'ಯಜಮಾನ' ಹುಟ್ಟುಹಬ್ಬ ಆಚರಿಸಿದ ಹಾವೇರಿ ರೈತ; ಅಭಿಮಾನಿಗಳಿಂದ ರಕ್ತದಾನ ಶಿಬಿರ! ಹಾವೇರಿ : ಜಿಲ್ಲೆಯಲ್ಲಿ ರೈತರೊಬ್ಬರು ತಮ್ಮ ಅಚ್ಚುಮೆಚ್ಚಿನ ಹೋರಿಗೆ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದ್ದಾರೆ. ಹಾನಗಲ್ ತಾಲೂಕಿನ ಕೆರೆಕ್ಯಾತನಹಳ್ಳಿ ಗ್ರಾಮದ ಸಿದ್ದರಾಮಪ್ಪ ಎಂಬವರು 'ಯಜಮಾನ' ಎಂಬ ಹೆಸರಿನ ಹೋರಿಯ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಐದು ವರ್ಷದ ಹೋರಿಯೊಂದಿಗೆ ಮನೆಯ ಇತರ ನಾಲ್ಕು ಹೋರಿಗಳನ್ನೂ ಸಿಂಗರಿಸಿ ಪೂಜೆ ಮಾಡಿದರು. ಯಜಮಾನನ ನೂರಾರು ಅಭಿಮಾನಿಗಳು ಭಾಗವಹಿಸಿದ್ದರು.
10 ಕೆ.ಜಿಯ ಕೇಕ್ ಕತ್ತರಿಸಿ ಹೋರಿಯ ಹುಟ್ಟುಹಬ್ಬ ಮಾಡಲಾಯಿತು. ನೂರಾರು ಜನರು ನೆಚ್ಚಿನ ಹೋರಿಗೆ ಕೇಕ್ ತಿನ್ನಿಸಿ ಸೆಲ್ಪಿ ಕ್ಲಿಕ್ಕಿಸಿಕೊಂಡರು. ಇದೇ ವೇಳೆ ರಕ್ತದಾನ ಶಿಬಿರವನ್ನೂ ಹಮ್ಮಿಕೊಳ್ಳಲಾಗಿತ್ತು. ಕೆರೆಕ್ಯಾತನಹಳ್ಳಿ ಗ್ರಾಮಸ್ಥರು ಮತ್ತು ಹೋರಿಯ ಅಭಿಮಾನಿಗಳು ರಕ್ತದಾನ ಮಾಡಿದರು. ಯುವಕ-ಯುವತಿಯರು ಸೇರಿ ಸುಮಾರು 50ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿ ಗಮನ ಸೆಳೆದರು.
ಮಾಲೀಕ ಸಿದ್ದರಾಮಪ್ಪ ಮಾತನಾಡಿ, ಯಜಮಾನ ಹೋರಿಯನ್ನು ಕಳೆದ ಐದು ವರ್ಷಗಳ ಹಿಂದೆ ಹಾನಗಲ್ ತಾಲೂಕಿನ ಗ್ರಾಮದಲ್ಲಿ ಖರೀದಿಸಿದೆ. ಮನೆಗೆ ತಂದ ನಂತರ ಸಾಕಷ್ಟು ತರಬೇತಿ ನೀಡಿ ಕೊಬ್ಬರಿ ಹೋರಿಯನ್ನಾಗಿ ಮಾಡಲಾಗಿದೆ. ಹೋರಿಯು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಪ್ರಶಸ್ತಿ ಪಡೆದುಕೊಂಡಿದೆ. ಜಿಲ್ಲೆಯ ಪ್ರಮುಖ ಕೊಬ್ಬರಿ ಹೋರಿಗಳಲ್ಲಿ ಇದೂ ಒಂದು ಎಂದರು.
ಹೋರಿಯನ್ನು ಕೃಷಿ ಚಟುವಟಿಕೆಗಳಿಗೂ ಬಳಕೆ ಮಾಡುತ್ತೇವೆ. ದೀಪಾವಳಿ ಸಂದರ್ಭ ವಿಶೇಷ ತರಬೇತಿ ನೀಡುತ್ತೇವೆ. ಈ ಸಂದರ್ಭದಲ್ಲಿ ಮುಂಜಾನೆ ಮತ್ತು ಸಂಜೆ ವೇಳೆ ಓಟದ ತರಬೇತಿ ನೀಡುತ್ತೇವೆ. ತುಂಬಿದ ಕೆರೆಯಲ್ಲಿ ಈಜಾಟ ಮಾಡಿಸುತ್ತೇವೆ. ಸೊಪ್ಪು, ಹಿಂಡಿ, ಬೂಸಾ, ಹುರುಳಿ, ಅಕ್ಕಿನುಚ್ಚು ಸೇರಿದಂತೆ ವಿವಿಧ ಪೌಷ್ಠಿಕ ಆಹಾರ ನೀಡುತ್ತೇವೆ. ಬಹುತೇಕರು ಸ್ಪರ್ಧೆಗಳಲ್ಲಿ ಬಹುಮಾನದ ಆಸೆಗೆ ಹೋರಿ ಓಡಿಸುತ್ತಾರೆ. ಆದರೆ ನಾವು ಸಂಭ್ರಮಕ್ಕೆ ಹೋರಿ ಓಡಿಸುತ್ತೇವೆ ಎಂದು ಸಿದ್ದರಾಮಪ್ಪ ಹೇಳಿದರು.
ಹೋರಿಯ ಓಟಕ್ಕೆ ನಾನು ಫಿದಾ ಆಗಿದ್ದೇನೆ. ಯಜಮಾನ ಹೋರಿಯ ಗತ್ತು, ಗಾಂಭಿರ್ಯ ನೋಡಿ ಅದಕ್ಕೆ ಅಭಿಮಾನಿಯಾಗಿದ್ದೇನೆ. ಹೋರಿಯ ಸ್ಪರ್ಧೆಯ ದಿನ, ಜನ್ಮದಿನ ಸೇರಿದಂತೆ ಪ್ರಮುಖ ದಿನಗಳಲ್ಲಿ ಹಾಜರಿದ್ದು, ಸಂಭ್ರಮದಲ್ಲಿ ಪಾಲ್ಗೊಳ್ಳುತ್ತೇವೆ ಎನ್ನುತಾರೆ ಹೋರಿಯ ಅಭಿಮಾನಿ ನಂಜುಂಡೇಶ್ವರ.
ಉತ್ತರ ಕರ್ನಾಟಕದ ಭಾಗದ ಪ್ರಮುಖ ಜಾನಪದ ಕ್ರೀಡೆಗಳಲ್ಲಿ ದನ ಬೆದರಿಸುವ ಸ್ಪರ್ಧೆಯೂ ಒಂದು. ಸ್ಥಳೀಯವಾಗಿ ಇದನ್ನು ಕೊಬ್ಬರಿ ಹೋರಿ ಹಟ್ಟಿಹಬ್ಬ ಎಂದು ಕರೆಯುತ್ತಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸುವ ಹೋರಿಗಳಿಗೆ ಇಲ್ಲಿ ಸಾವಿರಾರು ಅಭಿಮಾನಿಗಳಿರುತ್ತಾರೆ. ಇಲ್ಲಿ ಹೋರಿಗಳು ಒಂದೊಂದು ಹೆಸರಿನಿಂದ ಖ್ಯಾತಿ ಪಡೆದಿವೆ.
ಇದನ್ನೂ ಓದಿ :ಕುದುರೆಯೊಂದಿಗೆ ಹಳ್ಳಿಕಾರ್ ಹೋರಿ ಕಟ್ಟಿ ಓಡಿಸುವ ರೈತ: ಕಾರಣವೇನು ಗೊತ್ತೇ?