ಹಾವೇರಿ:ಕುರಿಗಾಹಿ ಆಗಿದ್ದ ರೈತನೋರ್ವ ಮೂಲ ಕಸುಬಿನಿಂದ ನಷ್ಟ ಅನುಭವಿಸಿದ ಕಾರಣ ಮಾವು ಬೆಳೆಗಾರರಾದರು. ಮಾವು ಬೆಳೆ ಇದೀಗ ಈ ರೈತನ ಕೈ ಹಿಡಿದಿದ್ದು, ಯಶಸ್ವಿ ಮಾವು ಬೆಳೆಗಾರ ಎನಿಸಿಕೊಂಡಿದ್ದಾರೆ.
ಹಾವೇರಿ ತಾಲೂಕಿನ ಬಸಾಪುರದ ನಾಗಪ್ಪ ಮುದ್ದಿ ಮೂಲತಃ ಕುರಿಗಾಹಿ. ಕುರಿಸಾಕಾಣಿಕೆ ಕಸುಬು ಮಾಡಿಕೊಂಡಿದ್ದ ನಾಗಪ್ಪನಿಗೆ ಕುರಿಗಳಿಗೆ ಕಾಣಿಸಿಕೊಂಡ ರೋಗ ಇನ್ನಿಲ್ಲದ ಆರ್ಥಿಕ ನಷ್ಟ ಉಂಟು ಮಾಡಿತ್ತು. ಇದರಿಂದ ಕುರಿಕಾಯುವ ಕಸುಬು ಬಿಟ್ಟ ನಾಗಪ್ಪ, ಮುಖಮಾಡಿದ್ದು ಸಾವಯವ ಕೃಷಿಯತ್ತ. ಅದರಲ್ಲೂ ತೋಟಗಾರಿಕೆ ಬೆಳೆಯಾದ ಮಾವು ಬೆಳೆಯನ್ನು ಆಯ್ಕೆ ಮಾಡಿಕೊಂಡ್ರು. ನಾಗಪ್ಪ ಆರಂಭದಲ್ಲಿ ಏಳು ಎಕರೆಯಲ್ಲಿ ಮಾವು ಬೆಳೆದರು. ಸಾವಯವ ಬೆಳೆ ನೈಸರ್ಗಿಕವಾಗಿ ಹಣ್ಣು ಮಾಡುವಿಕೆ ಕಾರ್ಯ ನಾಗಪ್ಪನ ಕೈಹಿಡಿಯಿತು. ನಾಗಪ್ಪ ಇದೀಗ 30 ಎಕರೆ ಜಮೀನಿನಲ್ಲಿ ಮಾವು ಬೆಳೆಯುತ್ತಿದ್ದಾರೆ. ಇವರು ಬೆಳೆದ ಈ ಸಾವಯುವ ಮಾವು ಬೆಂಗಳೂರಿನಿಂದ ರಾಜಸ್ಥಾನದವರೆಗೆ ರಫ್ತಾಗುತ್ತದೆ.