ಹಾವೇರಿ:ಈ ಉಪ ಚುನಾವಣೆಯನ್ನು ನಾವು ಬಯಸಿರಲಿಲ್ಲ. ಸಿ.ಎಂ.ಉದಾಸಿ ಅನಾರೋಗ್ಯದಿಂದ ಮೃತಪಟ್ಟ ಬಳಿಕ ಅವರ ಸ್ಥಾನ ಭರ್ತಿ ಮಾಡಲು ಈ ಎಲೆಕ್ಷನ್ ನಡೆಯುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಾರಿ ಬೈ ಎಲೆಕ್ಷನ್ನಲ್ಲಿ ನಾವೇ ಗೆಲ್ಲೋದು: ಸಿದ್ದರಾಮಯ್ಯ ‘ನಮ್ಮ ಅಭ್ಯರ್ಥಿಯೇ ಗೆಲ್ತಾರೆ’
ಹಾನಗಲ್ ಬೈ ಎಲೆಕ್ಷನ್ ಹಿನ್ನೆಲೆ ತಹಶೀಲ್ದಾರ್ ಕಚೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ನಾಮಪತ್ರ ಸಲ್ಲಿಸಿದರು. ಈ ವೇಳೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಉಪಸ್ಥಿತರಿದ್ದು, ಬಳಿಕ ಮಾತನಾಡಿದ್ರು. ಈ ಉಪಚುನಾವಣೆಯನ್ನು ನಾವು ಬಯಸಿರಲಿಲ್ಲ. ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಮಾನೆ ಗೆಲ್ಲುತ್ತಾರೆ ಅನ್ನೋ ವಿಶ್ವಾಸವಿತ್ತು. ಆದರೆ, ನಮಗೆ ಸೋಲಾಯ್ತು. ಈ ಬಾರಿ ಮಾನೆ ನೂರಕ್ಕೆ ನೂರು ಗೆಲ್ತಾರೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ರು.
‘ಬಿಜೆಪಿ ಬಗ್ಗೆ ಭ್ರಮನಿರಸನ’
ಕೇಂದ್ರ ಮತ್ತು ರಾಜ್ಯದ ಡಬಲ್ ಎಂಜಿನ್ ಸರ್ಕಾರದ ಬಗ್ಗೆ ಜನರು ಬಹಳ ಭರವಸೆ ಇಟ್ಟುಕೊಂಡಿದ್ರು. ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಸ್ವರ್ಗ ಸೃಷ್ಟಿಸ್ತೇವೆ ಎಂದಿದ್ರು. ಆದರೆ ಇದ್ಯಾವ್ದೂ ಆಗ್ಲಿಲ್ಲ. ಜನರು ಬಿಜೆಪಿ ಬಗ್ಗೆ ಭ್ರಮನಿರಸನಗೊಂಡಿದ್ದಾರೆ. ಕೊರೊನಾದಿಂದ ಅನೇಕರು ಮನೆಯಲ್ಲಿದ್ದ ಒಡವೆಗಳನ್ನ ಗಿರವಿ ಇಟ್ಟಿದ್ದಾರೆ.
ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅದೇ ಸರ್ಕಾರವಿದ್ರೂ, ಕೊಟ್ಟ ಭರವಸೆಯೊಂದೂ ಈಡೇರಲಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಹಾಳಾಗಿ ಹೋಗಿದೆ. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯದ ಸ್ಥಿತಿಯಲ್ಲಿ ಜನರು ಬದಲಾವಣೆ ಬಯಸಿದ್ದಾರೆ ಎಂದು ಹೇಳಿದ್ರು.
‘ಈ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿಯಲ್ಲ’
ಬಿಜೆಪಿ ಸರ್ಕಾರದ ಆಡಳಿತದಿಂದ ಜನ ಬೇಸತ್ತು ಹೋಗಿದ್ದು, ಹಾನಗಲ್ ಮತ್ತು ಸಿಂದಗಿ ಬೈ ಎಲೆಕ್ಷನ್ನಲ್ಲಿ ನಾವು ಗೆಲ್ತೀವಿ. ಈ ಚುನಾವಣೆ ಮುಂದಿನ ಚುನಾವಣೆಗೆ ದಿಕ್ಸೂಚಿಯಲ್ಲ. ಇದೊಂದು ಮಹತ್ವದ ಚುನಾವಣೆ. ಉಪಚುನಾವಣೆಗಳು ಸಾರ್ವತ್ರಿಕ ಚುನಾವಣೆಗೆ ಮಾರ್ಗಸೂಚಿಗಳಾಗೋದಿಲ್ಲ. ಹಿಂದೆ ನಾವು ಎರಡು ಉಪಚುನಾವಣೆಗಳಲ್ಲಿ ಗೆದ್ದಿದ್ದೆವು. ಆದರೆ ಸಾರ್ವತ್ರಿಕ ಚುನಾವಣೆಯಲ್ಲಿ ಸೋತೆವು. ನನಗೆ ವಿಸ್ವಾಸವಿದೆ, ಹಾನಗಲ್ ಮತ್ತು ಸಿಂದಗಿ ಎರಡೂ ಕಡೆ ಗೆಲ್ತೀವಿ ಎಂದರು.
‘ಸೋಲ್ತೀವಿ ಅಂತಾ ಹೇಳಕ್ಕಾಗುತ್ತಾ?’
ಬಿಜೆಪಿಯವರು ನಾವು ಸೋಲ್ತೀವಿ ಅಂತಾ ಹೇಳೋಕಾಗುತ್ತಾ..?, ಅವರೂ ಗೆಲ್ತೀವಿ ಅಂತಾನೆ ಹೇಳೋದು. ಸೋಲು - ಗೆಲುವಿನ ಬಗ್ಗೆ ಜನತೆ ತೀರ್ಮಾನ ಮಾಡ್ತಾರೆ ಎಂದು ಬಿಜೆಪಿಗೆ ತಿರುಗೇಟು ಕೊಟ್ರು.
‘ಜೆಡಿಎಸ್ನವ್ರು ನಮ್ಮನ್ನ ಟಾರ್ಗೆಟ್ ಮಾಡಿದ್ದಾರೆ’
ಜೆಡಿಎಸ್ ನವರು ನಮ್ಮನ್ನ ಟಾರ್ಗೆಟ್ ಮಾಡ್ಕೊಂಡು ಚುನಾವಣೆಗೆ ನಿಂತಿದ್ದಾರೆ. ಅವರ ಬಗ್ಗೆ ನಾನು ಮಾತನಾಡಿಲ್ಲ.
‘ಐಟಿ ದಾಳಿ ಬಗ್ಗೆ ಯಡಿಯೂರಪ್ಪರನ್ನೇ ಕೇಳಿ’
ಯಡಿಯೂರಪ್ಪ ಆಪ್ತರ ಮನೆ ಮೇಲೆ ಐಟಿ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ದಾಳಿ ಬಗ್ಗೆ ಯಡಿಯೂರಪ್ಪರನ್ನೇ ಕೇಳಿ. ನಾನೇನೂ ಹೇಳಲ್ಲಪ್ಪ. ಇನ್ ಕಂ ಟ್ಯಾಕ್ಸ್ನವರು ಯಾರ ಮನೆ ಮೇಲಾದ್ರೂ ದಾಳಿ ಮಾಡಬಹುದು. ಯಡಿಯೂರಪ್ಪ ಆಪ್ತರನ್ನೇ ಯಾಕೆ ಟಾರ್ಗೆಟ್ ಮಾಡಿದ್ರು ಅನ್ನೋದು ನಂಗೊತ್ತಿಲ್ಲ ಅಂತಾ ಹೇಳಿದ್ರು.
ಇದನ್ನೂ ಓದಿ: ನಿಮ್ಮ ಶಾಸಕರೇ ಹಾದಿ ಬೀದಿಯಲ್ಲಿ ನಿಂತು ಸಿಎಂ ʼಫ್ಯಾಮಿಲಿ ಬಿಸಿನೆಸ್ʼ ಬಗ್ಗೆ ಟೀಕಿಸಿದನ್ನ ಮರೆತುಬಿಟ್ರಾ? ಹೆಚ್‌ಡಿಕೆ ಪ್ರಶ್ನೆ