ರಾಣೆಬೆನ್ನೂರು: ದಿಢೀರನೆ ಈರುಳ್ಳಿ ಬೆಲೆ ಕುಸಿತ ಕಂಡ ಹಿನ್ನೆಲೆಯಲ್ಲಿ ರಾಣೆಬೆನ್ನೂರಿನ ಈರುಳ್ಳಿ ಮಾರುಕಟ್ಟೆಯಲ್ಲಿ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿ ಕಿಲೋ ಈರುಳ್ಳಿಯು ಆಯಾ ಪ್ರದೇಶಗಳಿಗೆ ಅನುಗುಣವಾಗಿ 40ರಿಂದ 100 ರೂ.ಗೆ ಮಾರಟವಾಗುತ್ತಿತ್ತು. ಅಲ್ಲದೆ ಒಂದು ಕ್ವಿಂಟಾಲ್ ಈರುಳ್ಳಿ ಸುಮಾರು 6000 ರೂ.ಗಳಿಂದ 10000 ಸಾವಿರ ರೂ.ವರಗೆ ಮಾರಟವಾಗಿದೆ. ಆದರ ಇಂದು ಕೇವಲ 900 ರೂ.ಗಳಿಂದ 1400 ರೂ.ವರೆಗೆ ಮಾತ್ರ ಹರಾಜು ಕೂಗಲಾಗುತ್ತಿದ್ದು, ರೈತರು ದಿಢೀರನೆ ಪ್ರತಿಭಟನೆ ನಡೆಸಿದ್ದಾರೆ.
ರೈತರು ಕಳೆದ ಒಂದು ವಾರದಿಂದ ಈರುಳ್ಳಿಯ ಉತ್ತಮ ಬೆಲೆ ನೋಡಿ, ಮಳೆ-ಗಾಳಿ ಎನ್ನದೆ ಉಳ್ಳಾಗಡ್ಡಿ ಒಣಗಿಸಿ ತಂದಿದ್ದರು. ಅಧಿಕ ಮೊತ್ತ ಸಿಗುತ್ತದೆ ಎಂಬ ಕನಸಿಗೆ ಇಂದು ಬೆಲೆ ಕುಸಿತ ಕಣ್ಣೀರು ತರೆಸಿದೆ. ವರ್ಷ ಪೂರ್ತಿ ಮಾಡಿದ ವೆಚ್ಚಕ್ಕೆ ಈರುಳ್ಳಿ ಬೆಲೆ ಕುಸಿತದಿಂದ ರೈತರಿಗೆ ದಿಕ್ಕು ತೋಚದಂತಾಗಿದೆ.
ಈರುಳ್ಳಿ ಬೆಲೆ ಕುಸಿತದಿಂದ ರೈತರ ಪ್ರತಿಭಟನೆ ನಗರದ ಈರುಳ್ಳಿ ಮಾರುಕಟ್ಟೆಯೊಳಗೆ ಟೆಂಡರ್ ಪ್ರಕ್ರಿಯೆಯಲ್ಲಿ ದಲ್ಲಾಳಿಗಳು ಹಾಗೂ ಖರೀದಿದಾರರು ಒಳ ಒಪ್ಪಂದದ ಮೂಲಕ ರೈತರ ಬೆಳೆಯನ್ನು ಅಲ್ಪ ಮೊತ್ತಕ್ಕೆ ಹರಾಜು ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ಮೋಸವಾಗುತ್ತಿದ್ದು, ಹರಾಜು ಪ್ರಕ್ರಿಯೆಯನ್ನು ರದ್ದುಗೊಳಿಸಿ ನೇರ ಖರೀದಿಗೆ ಅವಕಾಶ ಮಾಡಿಕೊಡಬೇಕು ಎಂದು ರೈತರು ಪ್ರತಿಭಟನೆ ನಡೆಸಿದ್ದಾರೆ.