ಮಳೆಯ ಆರ್ಭಟಕ್ಕೆ ಕೊಳೆಯುತ್ತಿರುವ ಈರುಳ್ಳಿ: ಬೆಳೆಗಾರರ ಕಣ್ಣೀರು - haveri rain news
ಹಾವೇರಿ ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಮಳೆಯಿಂದಾಗಿ ಈರುಳ್ಳಿ ಬೆಳೆ ಕೊಳೆಯುತ್ತಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದಾರೆ.
![ಮಳೆಯ ಆರ್ಭಟಕ್ಕೆ ಕೊಳೆಯುತ್ತಿರುವ ಈರುಳ್ಳಿ: ಬೆಳೆಗಾರರ ಕಣ್ಣೀರು onion crop demolish due to heavy rain](https://etvbharatimages.akamaized.net/etvbharat/prod-images/768-512-8483124-330-8483124-1597855763402.jpg)
ಮಳೆಯ ಆರ್ಭಟಕ್ಕೆ ಈರುಳ್ಳಿ ಕೊಳೆತ
ಹಾವೇರಿ: ಜಿಲ್ಲೆಯಲ್ಲಿಯೇ ಅತಿಹೆಚ್ಚು ಈರುಳ್ಳಿ ಬೆಳೆಯುವ ಗ್ರಾಮ ಕೋಣನತಂಬಿಗೆ. ಈ ಗ್ರಾಮದಲ್ಲಿ 160 ಕ್ಕೂ ಅಧಿಕ ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ. ಇಲ್ಲಿಯ ಬೆಳೆಗಾರರು ಬೆಂಗಳೂರಿನ ತರಕಾರಿ ಮಾರುಕಟ್ಟೆಯಲ್ಲಿ ಸಹ ಹೆಸರು ಮಾಡಿದ್ದಾರೆ. ಆದರೆ ಪ್ರಸ್ತುತ ವರ್ಷದ ಮಳೆ ಈರುಳ್ಳಿ ಬೆಳೆಗಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮಳೆ ಅಧಿಕವಾದ ಕಾರಣ ಈರುಳ್ಳಿ ಬೆಳೆ ಕೊಳೆಯಲಾರಂಭಿಸಿದೆ. ಭೂಮಿಯೊಳಗೆ ಇರುವ ಗಡ್ಡೆ ಸಹ ಕೊಳೆಯಲಾರಂಭಿಸಿದ್ದು ಬೆಳೆ ಬರುವ ಮುನ್ನವೇ ಈರುಳ್ಳಿ ಬೆಳೆಗಾರನ ಕಣ್ಣಲ್ಲಿ ನೀರು ತರಿಸಿದೆ.
ಮಳೆಯ ಆರ್ಭಟಕ್ಕೆ ಈರುಳ್ಳಿ ಕೊಳೆತ
ಬಂಪರ್ ಬೆಳೆ ಬಂದರೆ ಬೆಲೆ ಇರಲ್ಲ, ಬೆಲೆ ಬಂದಾಗ ಬೆಳೆ ಇರುವುದಿಲ್ಲ. ಈ ವರ್ಷ ಬೆಲೆ, ಬೆಳೆ ಎರಡೂ ಚೆನ್ನಾಗಿತ್ತು. ಆದರೆ ವರುಣನ ಆರ್ಭಟಕ್ಕೆ ಈರುಳ್ಳಿ ಕೊಳೆಯಲಾರಂಭಿಸಿದೆ. ಇಷ್ಟಾದರೂ ಯಾವ ಅಧಿಕಾರಿಗಳು ಜನಪ್ರತಿನಿಧಿಗಳು ತಮ್ಮ ನೋವನ್ನು ಆಲಿಸಿಲ್ಲ. ಕೃಷಿ ಸಚಿವ ಬಿ.ಸಿ. ಪಾಟೀಲ ಇದೇ ಜಿಲ್ಲೆಯವರು. ತಮ್ಮ ಬೆಳೆ ಹಾನಿಗೆ ಸ್ಪಂದಿಸುವಂತೆ ರೈತರು ಮನವಿ ಮಾಡಿದ್ದಾರೆ.