ಹಾವೇರಿ :ಜಿಲ್ಲೆಯ ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿರುವ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಈಗ ಹಳೆಯ ಬಸ್‌ಗಳದ್ದೇ ಸದ್ದು. ನಿಲ್ದಾಣದಲ್ಲಿ ಎಲ್ಲಿ ನೋಡಿದರಲ್ಲಿ ಅಲ್ಲಿ ಡಕೋಟಾ ಬಸ್‌ಗಳು ಕಾಣ ಸಿಗುತ್ತವೆ. ಗ್ಲಾಸ್ ಒಡೆದ ಬಸ್‌ಗಳು, ಸೀಟ್ ಮುರಿದ ಮತ್ತು ತುಕ್ಕು ಹಿಡಿದ ಬಸ್‌ಗಳು ನಗರದಲ್ಲಿ ಸಂಚರಿಸುತ್ತಿದ್ದು, ಪ್ರಯಾಣಿಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಜನರು, ವಿದ್ಯಾರ್ಥಿಗಳಿಗೆ ಸಮಸ್ಯೆ..ಈ ಗುಜರಿ ಬಸ್ ಗಳು ನಗರದಲ್ಲಿ ಸಂಚಾರ ನಡೆಸುತ್ತಿದ್ದು, ಎಲ್ಲೆಂದರಲ್ಲಿ ಕೆಟ್ಟು ನಿಂತು ಬೇರೆ ಬಸ್‌ಗಳಿಗಾಗಿ ದಿನವಿಡಿ ಕಾಯುವ ಸ್ಥಿತಿ ಜನರಿಗೆ ಬಂದೊದಗಿದೆ. ಅಲ್ಲದೆ ಹಾವೇರಿಯಿಂದ ಹೊಸರಿತ್ತಿ, ಗುತ್ತಲ, ತಿಳುವಳ್ಳಿ ಸವಣೂರು ತಾಲೂಕಿನ ಗ್ರಾಮಗಳಿಗೆ ತೆರಳುವ ಬಸ್‌ಗಳು ಸರಿಯಾದ ಸಮಯಕ್ಕೆ ಲಭಿಸದಿರುವುದರಿಂದ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ಕಷ್ಟವಾಗಿದೆ.
ಸಾರಿಗೆ ನಿಯಂತ್ರಣಾಧಿಕಾರಿ ಸಮರ್ಥನೆ.. ಆದರೆ ಈ ಬಗ್ಗೆ ವಾಯುವ್ಯ ಸಾರಿಗೆ ಇಲಾಖೆಯ ಹಾವೇರಿ ಸಾರಿಗೆ ನಿಯಂತ್ರಣಾಧಿಕಾರಿ ಜಗದೀಶ್ ಅವರು, ಈ ಬಸ್‌ಗಳೆಲ್ಲಾ ಓಡಾಟಕ್ಕೆ ಅರ್ಹವಾಗಿದ್ದರಿಂದ ಸಂಚಾರ ನಡೆಸುತ್ತಿವೆ. ಜಿಲ್ಲೆಯಲ್ಲಿ 260 ಬಸ್‌ಗಳನ್ನು ಗ್ರಾಮಾಂತರ ಪ್ರದೇಶಗಳಿಗೆ ಒದಗಿಸಲಾಗಿದೆ. ಆದರೆ ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದಾಗಿ ರಸ್ತೆಗಳು ಹಾಳಾಗಿರುವುದರಿಂದ ಪದೇ ಪದೇ ದುರಸ್ತಿಗೆ ಬರುತ್ತಿವೆ ಎಂದು ಅವರು ಹೇಳುತ್ತಾರೆ.