ಹಾವೇರಿ: ಡಿಪೋ ಆವರಣದಲ್ಲಿಯೇ ಸಾರಿಗೆ ನೌಕರನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಬಸ್ ಡಿಪೋದಲ್ಲಿ ನಡೆದಿದೆ. ರಾಣೆಬೆನ್ನೂರು ನಗರದ ಹೊರ ವಲಯದ ಮಾಗಡಿ ರಸ್ತೆಯಲ್ಲಿರುವ NWKRTC ಬಸ್ ಡಿಪೋದಲ್ಲಿ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ನೌಕರನನ್ನು ಡ್ರೈವರ್ ಕಂ ಕಂಡಕ್ಟರ್ 48 ವರ್ಷದ ಮಲ್ಲನಗೌಡ ಬಡಿಗೇರ ಎಂದು ಗುರುತಿಸಲಾಗಿದೆ. ಹಲಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಲ್ಲನಗೌಡ ಒಂದು ವಾರದಿಂದ ರಜೆಯಲ್ಲಿದ್ದು, ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಭಾನುವಾರವಷ್ಟೇ ಕರ್ತವ್ಯಕ್ಕೆ ಹಾಜರಾಗಿದ್ದರು. ಇಂದು ಡಿಪೋದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ತನಿಖೆಗೆ ಆದೇಶ:ಮಲ್ಲನಗೌಡ ಆತ್ಮಹತ್ಯೆ ಸಂಬಂಧ ಇಲಾಖಾ ತನಿಖೆಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಅದೇಶಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವ್ಯವಸ್ಥಾಪಕ ನಿರ್ದೇಶಕರು, ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಡವಳಗಿ ಗ್ರಾಮದ ನಿವಾಸಿಯಾಗಿದ್ದ ಮಲ್ಲಿಕಾರ್ಜುನ ಅವರು ಕಳೆದ 10 ವರ್ಷಗಳಿಂದ ರಾಣೆಬೆನ್ನೂರು ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಜೂನ್ 25 ರಂದು ಕರ್ತವ್ಯ ಮುಗಿಸಿಕೊಂಡು ಹೋಗಿದ್ದಾರೆ. ಜುಲೈ 2 ರಂದು ಡಿಪೋ ಮೇಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಜುಲೈ 3 ರಂದು ಕರ್ತವ್ಯಕ್ಕೆ ಬರುವುದಾಗಿ ತಿಳಿಸಿದ್ದರು. ಅದರಂತೆ ಜುಲೈ 3 ರಂದು ಬೆಳಿಗ್ಗೆ 3-15ರ ಸಮಯದಲ್ಲಿ ಡಿಪೋಗೆ ಬಂದಿದ್ದು, ಬಳಿಕ ಆವರಣದಲ್ಲೇ ಆತ್ಮಹತ್ಯೆ ಹಾಕಿಕೊಂಡಿರುವುದಾಗಿ ತಿಳಿದು ಬಂದಿದೆ ಎಂದರು.
ಮಾಹಿತಿ ತಿಳಿದ ಕೂಡಲೇ ಹಾವೇರಿ ವಿಭಾಗೀಯ ಕಚೇರಿ ಹಾಗೂ ಹುಬ್ಬಳ್ಳಿ ಕೇಂದ್ರ ಕಚೇರಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡಸಿ ತ್ವರಿತವಾಗಿ ವರದಿ ಸಲ್ಲಿಸುವಂತೆ ಹಿರಿಯ ಅಧಿಕಾರಿಗಳಿಗೆ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಆದೇಶಿಸಲಾಗಿದೆ ಎಂದಿದ್ದಾರೆ.
ಮಗಳು ಆತ್ಮಹತ್ಯೆ, ಸುದ್ದಿ ತಿಳಿದು ತಾಯಿ ನಿಧನ: ಬಾಡಿಗೆದಾರ ಮಹಿಳೆಯ ಕಿರುಕುಳ ತಾಳಲಾರದೆ ಮನನೊಂದು ಮನೆಯ ಮಾಲೀಕ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಇತ್ತೀಚೆಗೆ ಹಾಸನ ಜಿಲ್ಲೆಯ ದಾಸರಕೊಪ್ಪದಲ್ಲಿ ನಡೆದಿತ್ತು. ಮಗಳು ಸಾವನ್ನಪ್ಪಿದ ವಿಷಯ ಕೇಳಿ ತಾಯಿ ಕೂಡಾ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಮನೆಯಲ್ಲಿ ಭೋಗ್ಯಕ್ಕಿದ್ದ ಮಹಿಳೆಯೊಬ್ಬರು ಕಿರುಕುಳ ನೀಡುತ್ತಿದ್ದುದಲ್ಲದೆ, ಹಲ್ಲೆಗೂ ಕೂಡಾ ಮುಂದಾಗಿದ್ದರು. ಇದರಿಂದ ಬೇಸರಗೊಂಡು 55 ವರ್ಷದ ಲಲಿತಮ್ಮ ಎಂಬ ಮಹಿಳೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆಯ ಪತಿ ದೂರಿದ್ದರು.
ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ: ಪತಿ ಹಾಗೂ ಮನೆಯವರ ಕಿರುಕುಳ ತಾಳಲಾರದೆ ಡೆತ್ ನೋಟ್ ಬರೆದಿಟ್ಟು ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರ ತಾಲೂಕಿನ ಉಪ್ಪುಕುಂಟೆ ಗ್ರಾಮದಲ್ಲಿ ಇತ್ತೀಚೆಗೆ ನಡೆದಿತ್ತು. 26 ವರ್ಷದ ಸುಗುಣ ತನ್ನ ಸಾವಿಗೆ ಮನೆಯವರ ಕಿರುಕುಳವೇ ಕಾರಣ ಎಂದು ಡೆತ್ ನೋಟ್ ಬರೆದು ತನ್ನ ತಮ್ಮನಿಗೆ ಮೆಸೇಜ್ ಮಾಡಿ, ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಮೃತ ಮಹಿಳೆಯ ಸಹೋದರ ನೀಡಿದ ದೂರಿನ ಅನ್ವಯ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:ಬಾಡಿಗೆದಾರರ ಕಿರುಕುಳ ತಾಳಲಾರದೇ ಮನೆ ಯಜಮಾನಿ ಆತ್ಮಹತ್ಯೆ: ಮಗಳ ಸಾವಿನ ಸುದ್ದಿ ತಿಳಿದು ತಾಯಿಗೂ ಹೃದಯಾಘಾತ