ರಾಣೆಬೆನ್ನೂರು:ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನ. 7 ರಂದು ನಗರಕ್ಕೆ ಆಗಮಿಸಲಿದ್ದು, ನಗರದ ಹೊರವಲಯದ ಹೂಲಿಹಳ್ಳಿ ಬಳಿ ಇರುವ ಮೆಗಾ ಮಾರುಕಟ್ಟೆಯಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ.
ಸುಮಾರು 220 ಎಕರೆ ವಿಸ್ತೀರ್ಣ ಹೊಂದಿರುವ ಮೆಗಾ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಕಾಮಗಾರಿಗಳು ನಡೆದಿವೆ. ಸದ್ಯ ರಾಜ್ಯ ಸರ್ಕಾರ ಡಬ್ಲ್ಯೂಐ ನಿಧಿಯಲ್ಲಿ ಸುಮಾರು 105 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳನ್ನು ಮೆಗಾ ಮಾರುಕಟ್ಟೆಯಲ್ಲಿ ಕೈಗೆತ್ತಿಕೊಂಡಿದೆ.
ರಾಜ್ಯದ ಹೈಟೆಕ್ ಮಾರುಕಟ್ಟೆ...
ನಗರದಿಂದ ಸುಮಾರು ಮೂರು ಕಿ.ಮೀ. ದೂರ ಇರುವ ಮೆಗಾ ಮಾರುಕಟ್ಟೆ, ಸುಮಾರು 220 ಎಕರೆ ವಿಶಾಲವಾದ ಜಾಗವನ್ನು ಹೊಂದಿದೆ. ಇಲ್ಲಿ ಈಗಾಗಲೇ 1ಲಕ್ಷ ಮೆಟ್ರಿಕ್ ಟನ್ ದಾಸ್ತನು ಶೇಖರಣೆ ಮಾಡುವ ಸುಮಾರು ಆರು ಗೋದಾಮುಗಳನ್ನು ಸ್ಥಾಪಿಸಲಾಗಿದೆ. ಇನ್ನು ಮಾರುಕಟ್ಟೆ ಅಭಿವೃದ್ಧಿ ಸಲುವಾಗಿ ರಾಜ್ಯ ಸರ್ಕಾರ ಈ ಮಾರುಕಟ್ಟೆಗೆ ಹೆಚ್ಚು ಒತ್ತಡ ನೀಡುತ್ತಿದ್ದು, ವಿವಿಧ ಮೂಲಭೂತ ಸೌಕರ್ಯಗಳನ್ನು ಮಾಡುವ ಮೂಲಕ ರಾಜ್ಯದಲ್ಲಿ ಹೈಟೆಕ್ ಮಾರುಕಟ್ಟೆ ಮಾಡಲು ಮುಂದಾಗಿದೆ.
ಸದ್ಯ ಮಾರುಕಟ್ಟೆಯಲ್ಲಿ ಸಿ.ಸಿ. ಗಟಾರ, ಹೈವೆ ಮಾರುಕಟ್ಟೆ, ಹೋಟೆಲ್, ಆಫೀಸ್, ರೈತರ ನೇರ ಮಾರುಕಟ್ಟೆ, ರಸ್ತೆ, ಯುಜಿಡಿ, ಹರಾಜು ಕಟ್ಟೆ, ಮಾರಾಟ ಮಳಿಗೆ, ರೈತರ ವಿಶ್ರಾಂತಿ ಗೃಹ ಸೇರಿದಂತೆ ಹಲವು ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಈ ಕಾಮಗಾರಿಗಳಿಗೆ ಸಿಎಂ ಯಡಿಯೂರಪ್ಪ ಶಂಕು ಸ್ಥಾಪನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಯು. ಬಿ. ಬಣಕಾರ, ಜಿ.ಪಂ ಅಧ್ಯಕ್ಷ ಎಸ್. ಕೆ. ಕರಿಯಣ್ಣನವರ ಪಾಲ್ಗೊಳ್ಳಲಿದ್ದಾರೆ.