ಹಾವೇರಿ: ಜಿಲ್ಲೆಯ ರಾಣೆಬೆನ್ನೂರು ತಾಲೂಕು ಹುಲ್ಲತ್ತಿ ತಾಂಡಾದ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಇದೀಗ ಬಯಲಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಗ್ರಾಮದಲ್ಲಿದ್ದ ಸರ್ಕಾರಿ ಪ್ರಾಥಮಿಕ ಶಾಲೆ ಹಳೆಯ ಕಟ್ಟಡದಲ್ಲಿ ಆರಂಭವಾಗಿತ್ತು. ಆದರೆ, ಮೊದಲೇ ಹಳೆಯದಾಗಿದ್ದ ಕಟ್ಟಡ ಕುಸಿದ ಹಲವು ವರ್ಷಗಳೇ ಕಳೆದಿವೆ. ಹೊಸ ಶಾಲೆ ನಿರ್ಮಾಣವಾಗಿಲ್ಲ. ಹೀಗಾಗಿ ಶಾಲೆಯ ಸುಮಾರು 40 ಮಕ್ಕಳಿಗೆ ಬಯಲೇ ಶಾಲೆಯಾಗಿದೆ.
ಬಿಸಿಲಿದ್ದರೆ ಗಿಡದ ನೆರಳು, ಮಳೆಯಾದರೆ ಪಕ್ಕದ ದೇವಸ್ಥಾನದಲ್ಲಿ ಈ ಮಕ್ಕಳಿಗೆ ಪಾಠ ಮಾಡಲಾಗುತ್ತದೆ. ದೇವಸ್ಥಾನದಲ್ಲಿ ಯಾವುದಾದರೂ ಧಾರ್ಮಿಕ ಕಾರ್ಯಕ್ರಮವಿದ್ದರೆ ಶಾಲೆಗೆ ರಜೆ ಘೋಷಿಸಲಾಗುತ್ತದೆ. ಶಾಲೆಯಲ್ಲಿ ಒಂದರಿಂದ ಐದನೇ ತರಗತಿಯವರೆಗೆ 40 ವಿದ್ಯಾರ್ಥಿಗಳಿದ್ದಾರೆ. ಶಾಲಾ ಆವರಣದಲ್ಲಿ ಒಂದೇ ಒಂದು ಕೊಠಡಿ ಇದೆ.
ಪಾಕಶಾಲೆ ಎಂದು ಕರೆಯಲ್ಪಡುವ ಈ ಕೊಠಡಿಯೇ ಮುಖ್ಯೋಪಾಧ್ಯಾಯರ ಕಚೇರಿ ಮತ್ತು ಅಡುಗೆ ಕೋಣೆಯಾಗಿ ಮಾಡಲಾಗಿದೆ. ಅಲ್ಲಿ ಶಾಲಾ ಮಕ್ಕಳು ಮತ್ತು ಶಾಲೆಗೆ ಸಂಬಂಧಿಸಿದ ಕಾಗದ ಪಾತ್ರಗಳು, ಅಡುಗೆ ತಯಾರಿಸುವ ಪಾತ್ರೆಗಳು, ರೇಷನ್ ತುಂಬಿರುವುದರಿಂದ ಅಲ್ಲಿಯೂ ಮಕ್ಕಳಿಗೆ ಕುಳಿತು ಪಾಠ ಆಲಿಸೋಕೆ ಆಗೋದಿಲ್ಲ. ಶಾಲೆಗೆ ಕಟ್ಟಡವಿಲ್ಲದ ಕಾರಣ ಶೌಚಾಲಾಯ ಸಹ ಇಲ್ಲ. ಪರಿಣಾಮ ಮಕ್ಕಳು ಬಯಲಿನಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದು ಅನಿವಾರ್ಯವಾಗಿದೆ.