ಜೆಡಿಎಸ್ ಕಾರ್ಯಾಧ್ಯಕ್ಷ ಆಲ್ಕೋಡ್ ಹನುಮಂತಪ್ಪ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಹಾವೇರಿ: ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿಲ್ಲ. ಅದರ ಬದಲಾಗಿ ಎನ್‌ಡಿಎ ಮೈತ್ರಿಕೂಟದಲ್ಲಿ ಮಾತ್ರ ಸೇರ್ಪಡೆಯಾಗಿದೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಆಲ್ಕೋಡ್ ಹನುಮಂತಪ್ಪ ಸ್ಪಷ್ಟಪಡಿಸಿದ್ದಾರೆ.
ಹಾವೇರಿಯಲ್ಲಿಂದು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಎನ್‌ಡಿಎ ಬೇರೆ ಬಿಜೆಪಿ ಬೇರೆ. ಎನ್‌ಡಿಎ ಒಂದು ಭಾಗ ಬಿಜೆಪಿ. ಹಲವು ಪಕ್ಷಗಳು ಎನ್‌ಡಿಎ ಒಕ್ಕೂಟದಲ್ಲಿವೆ. ಅದರಲ್ಲಿ ಜೆಡಿಎಸ್ ಸಹ ಒಂದು ಎಂದು ತಿಳಿಸಿದರು.
ಸದ್ಯ ಎನ್‌ಡಿಎದಲ್ಲಿ ಸೇರಿದ್ದೇವೆ. ಸೀಟ್ ಬಿಟ್ಟುಕೊಡುವುದು, ತೆಗೆದುಕೊಳ್ಳುವುದು ಇನ್ನೂ ದೂರವಿದೆ. ಎನ್‌ಡಿಎ ಸಭೆ ನಡೆಯುತ್ತೆ ಅವಾಗ ಯಾವ ಯಾವ ಪಕ್ಷಗಳಿಗೆ ಯಾವ ಕ್ಷೇತ್ರ ಬಿಟ್ಟುಕೊಡಬೇಕು ಅನ್ನೋದು ತೀರ್ಮಾನವಾಗುತ್ತೆ. ಒಂದು ವೇಳೆ ಅವಕಾಶ ಸಿಕ್ಕರೆ ಉತ್ತರ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಎಂದು ಆಲ್ಕೋಡ್ ಹೇಳಿದರು.
ಇನ್ನು ನಮ್ಮದು ಜೆಡಿಎಸ್ ರಾಜ್ಯ ಪಕ್ಷ. ಆದರೆ ದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಸ್ವಂತ ಬಲದಿಂದ ಚುನಾವಣಿ ಎದುರಿಸುತ್ತಿಲ್ಲ. ಐದು ದಶಕಗಳ ಕಾಲ ಭಾರತವನ್ನಾಳಿದ ಕಾಂಗ್ರೆಸ್ ಈಗ ಮೂರೇ ರಾಜ್ಯಗಳಲ್ಲಿ ಅಧಿಕಾರದಲ್ಲಿದೆ ಎಂದು ಹನುಮಂತಪ್ಪ ಟೀಕಿಸಿದರು.
ಮೂರು ಬಾರಿ ಸಭೆ ಮಾಡಿ ತೀರ್ಮಾನ: ಅಂತಹ ಕಾಂಗ್ರೆಸ್ ಪಕ್ಷದವರೇ ಇಂಡಿಯಾ ಮೈತ್ರಿಕೂಟ ರಚಿಸಿಕೊಂಡಿದ್ದಾರೆ. ಜೆಡಿಎಸ್ ಮತ್ತು ಎನ್‌ಡಿಎ ಮೈತ್ರಿಯನ್ನು ಕೇವಲ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ತೆಗೆದುಕೊಂಡ ನಿರ್ಣಯವಲ್ಲ. ಎಲ್ಲ ಪದಾಧಿಕಾರಿಗಳು ಕಾರ್ಯಕರ್ತರು ಸೇರಿದಂತೆ ಮೂರು ಬಾರಿ ಸಭೆ ಮಾಡಿ ಕೈಗೊಂಡ ತೀರ್ಮಾನ. ಈ ಕುರಿತಂತೆ ನಡೆದ ಮೂರು ಸಭೆಗಳಲ್ಲಿ ನಮ್ಮ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಪಾಲ್ಗೊಂಡಿದ್ದರು. ಅವರು ನಮ್ಮ ಪಕ್ಷದಲ್ಲಿಯೇ ಇದ್ದಾರೆ ಎಂದು ಸ್ಪಷ್ಟಪಡಿಸಿದರು.
ನಲಪಾಡ್ ಅರಮನೆ ಮೈದಾನ ಮತ್ತು ಬಿಡದಿಯಲ್ಲಿ ನಮ್ಮ ಪಕ್ಷದ ಕಚೇರಿಯಲ್ಲಿ ಸೇರಿದಂತೆ ಮೂರು ಸಭೆ ಮಾಡಿ ಎನ್‌ಡಿಎ ಸೇರುವ ನಿರ್ಧಾರ ಮಾಡಲಾಯಿತು. ಮೂರು ಸಭೆಗಳಲ್ಲಿ ಸಿಎಂ ಇಬ್ರಾಹಿಂ ಮಾತನಾಡಿದ್ದಾರೆ. ಜಾತಿ ಗಣತಿ ವರದಿ ಬಹಿರಂಗ ಕುರಿತಂತೆ ಸಿದ್ದರಾಮಣ್ಣ ಹೇಳಿಕೊಳ್ಳುತ್ತಿದ್ದಾರೆ. ಆದರೆ ಅವರ ಪಕ್ಷದವರೇ ಅದನ್ನ ಬಹಿರಂಗ ಮಾಡದಂತೆ ತಡೆಹಿಡಿದಿದ್ದಾರೆ. ಜಾತಿ ಗಣತಿ ವರದಿ ಬಹಿರಂಗವಾದರೆ ಯಾರ್ಯಾರು ಎಷ್ಟೆಷ್ಟೂ ಸಂಖ್ಯೆಯಲ್ಲಿದ್ದಾರೆ ಅನ್ನೋದು ಗೊತ್ತಾಗುತ್ತೆ. ಹೀಗಾಗಿ ಅವರು ವರದಿ ಬಹಿರಂಗ ಮಾಡುತ್ತಿಲ್ಲವೆಂದು ಆಲ್ಕೋಡ್ ಹನುಮಂತಪ್ಪ ಆರೋಪಿಸಿದರು.
ಜೆಡಿಎಸ್ ಚಿಹ್ನೆ ಉಳಿಯುತ್ತದೆಯೇ ಎಂಬ ಪ್ರಶ್ನೆ ಮೂಡಿದೆ ಎಂದ ಇಬ್ರಾಹಿಂ: ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದರಿಂದ ಪಕ್ಷದ ಚಿಹ್ನೆ ಉಳಿಯುವ ಬಗ್ಗೆ ಪ್ರಶ್ನೆ ಮೂಡಿದೆ ಎಂದು ಬೆಂಗಳೂರಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಹೇಳಿದ್ದರು.
ಇದನ್ನೂಓದಿ:ಮೈತ್ರಿ ಮಾಡಿಕೊಂಡ ನಂತರ ನಮ್ಮ ಪಕ್ಷದ ಚಿಹ್ನೆ ಉಳಿಯುತ್ತದೆಯೇ ಎಂಬ ಪ್ರಶ್ನೆ ಮೂಡಿದೆ : ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ