ಹಾವೇರಿ:ನಗರದ ಮಧ್ಯಭಾಗದ ಶಹರಾ ಪೊಲೀಸ್ ಠಾಣೆ ಪಕ್ಕದಲ್ಲಿ ₹19 ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಸುಸಜ್ಜಿತ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ನಿರ್ಮಾಣಗೊಂಡಿದ್ದು, ಉದ್ಘಾಟನೆಗೆ ಸಿದ್ದವಾಗಿದೆ.
ಈ ಹಿಂದೆ ಸೂಕ್ತ ಸ್ಥಳವಿಲ್ಲದೇ ಕೆರಿಮತ್ತಿಹಳ್ಳಿಯಲ್ಲಿ ಪೊಲೀಸ್ ಆಧೀಕ್ಷಕರ ಕಚೇರಿ ನಿರ್ಮಾಣ ಮಾಡಲಾಗಿತ್ತು. ಕಚೇರಿ ಜಿಲ್ಲಾಕೇಂದ್ರ ಹಾವೇರಿಯಿಂದ ಐದು ಕೀಮಿ ದೂರದಲ್ಲಿತ್ತು. ಅದರಲ್ಲೂ ಮಳೆಗಾಲ ಬಂದರೆ ಅಲ್ಲಿಗೆ ತೆರಳುವುದು ದುಸ್ತರವಾಗಿತ್ತು. ಜನಸಾಮಾನ್ಯರು ತಮ್ಮ ದೂರು ದುಮ್ಮಾನಗಳ ಹೇಳಿಕೊಳ್ಳಲು ಎಸ್ಪಿ ಕಚೇರಿಗೆ ಅಲೆದಾಡುವುದೇ ಒಂದು ಕೆಲಸವಾಗಿತ್ತು.
ಮಳೆಗಾಲದಲ್ಲಿ ಹೆಗ್ಗೇರಿ ಮೈದುಂಬಿದರೆ ಹಾವೇರಿ ಎಸ್ಪಿ ಕಚೇರಿ ಹತ್ತೀರ ಸಹ ನೀರು ಕಾಣಿಸಿಕೊಳ್ಳುತ್ತಿತ್ತು. ಈ ಮಧ್ಯೆ ಅಧಿಕಾರಿಗಳು ಜನಪ್ರತಿನಿಧಿಗಳು ಈ ಸಮಸ್ಯೆ ಬಗೆಹರಿಸಲು ಹಲವಾರು ಸಲ ಪ್ರಯತ್ನಿಸಿದ್ದರು ಸಾಧ್ಯವಾಗಿರಲಿಲ್ಲ. ಕೊನೆಗೆ ಹಾವೇರಿ ಹಳೆಯ ನ್ಯಾಯಾಲಯ ಸಂಕೀರ್ಣಕ್ಕೆ ಎಸ್ಪಿ ಕಚೇರಿಯನ್ನ ಸ್ಥಳಾಂತರ ಮಾಡಲಾಯಿತು. ಆದರೆ, ಇಲ್ಲಿ ಇನ್ನೊಂದಿಷ್ಟು ಸಮಸ್ಯೆಗಳು ಕಾಣಿಸಿಲಾರಂಭಿಸಿದವು. ನಗರದ ಮಧ್ಯಭಾಗದಲ್ಲಿ ಕಚೇರಿ ಇದ್ದಿದ್ದರಿಂದ ವಾಹನಗಳ ಪಾರ್ಕಿಂಗ್ ಸ್ಥಳಾವಕಾಶ ಇರಲಿಲ್ಲ.
ಇನ್ನು ಸದ ಜನಜಂಗುಳಿಯ ಗದ್ದಲದ ನಡುವೆ ಎಸ್ಪಿ ಕಚೇರಿ ನಡೆಯುತ್ತಿತ್ತು. ಈ ಸಮಸ್ಯೆಗಳನ್ನ ಅರಿತ ಜಿಲ್ಲಾಡಳಿತ ನೂತನ ಎಸ್ಪಿ ಕಚೇರಿ ಸ್ಥಾಪನೆಗೆ ಮುಂದಾಯಿತು. ಹಾವೇರಿ ಶಹರ ಪೊಲೀಸ್ ಠಾಣೆ ಪಕ್ಕದಲ್ಲಿದ್ದ ಹಾವೇರಿ ಪೊಲೀಸ್ ಅಧಿಕಾರಿಗಳ ವಸತಿ ಕಟ್ಟಡಗಳ ಜಾಗದಲ್ಲಿ ನೂತನ ಎಸ್ಪಿ ಕಚೇರಿ ಸ್ಥಾಪಿಸಲು ಮುಂದಾಯಿತು. ಅಲ್ಲಿದ್ದ ಬಹುತೇಕ ಹಾಳಾಗಿದ್ದ ಮನೆಗಳನ್ನ ಕೆಡವಿ ಇದೀಗ ಸುಸಜ್ಜಿತ ಎಸ್ಪಿ ಕಚೇರಿಯನ್ನ ಸ್ಥಾಪಿಸಲಾಗಿದೆ.