ಹಾವೇರಿ : ಶಾಸಕ ನೆಹರು ಓಲೇಕಾರ್ ಅವರು ಸಿಎಂ ಬಸವರಾಜ ಬೊಮ್ಮಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಹಾವೇರಿಯಲ್ಲಿ ಮಾತನಾಡಿದ ಅವರು, ಶನಿವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ಈ ಸಂದರ್ಭದಲ್ಲಿ ಸಿಎಂಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದೇನೆ. ಇದರಿಂದಾಗಿ ಯಾವುದೇ ಸಮಾಜ, ಸಮುದಾಯದ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ತಿಳಿಸಿದರು.
ನಾನು ಸಿಎಂ ಬೊಮ್ಮಾಯಿಗೆ ಬೈದಿರುವುದು ಎಲ್ಲರಿಗೂ ಗೊತ್ತಿದೆ. ಅವರು ನನ್ನ ಬಗ್ಗೆ ಮಾತನಾಡಿದ್ದಾರೆ. ನಮ್ಮ ಬಳಿಯೂ ಸಾಕ್ಷಿಗಳಿವೆ. ಅವರ ಮಾತು ಕೇಳಿಸಿಕೊಂಡು ನಾವು ಕೂಡಾ ಎಮೋಷನಲ್ ಆಗಿ ಮಾತನಾಡಬೇಕಾಯಿತು ಎಂದರು. ನಮ್ಮ ಹುಡುಗ್ರು ಅವರ ಬಳಿ ಹೋಗಿ ಫೋನ್ ಕೊಡಲು ಹೋದಾಗ ಅವಾಚ್ಯವಾಗಿ ಮಾತನಾಡಿದ್ದಾರೆ. ಇನ್ನೂ ಬೇರೆ ಬೇರೆ ಮಾತುಗಳನ್ನು ಹೇಳಿದ್ದಾರೆ. ಹೀಗಾಗಿ ಮೊದಲಿನಿಂದಲೂ ದ್ವೇಷ ಸಾಧನೆ ಮಾಡಿರುವುದರಿಂದ ಇಂತಹ ಹೇಳಿಕೆ ಬಂದಿದೆಯೇ ಹೊರತು ವೈಯಕ್ತಿಕವಾಗಿ ಬರುವಂಥದ್ದಲ್ಲ ಎಂದು ತಿಳಿಸಿದರು. ಈ ಕುರಿತಂತೆ ಆಣೆ ಪ್ರಮಾಣ ಮಾಡಲು ಸಿಎಂ ಬೊಮ್ಮಾಯಿ ಬರಲಿ ಎಂದು ನೆಹರು ಓಲೇಕಾರ್ ಸವಾಲು ಹಾಕಿದ್ದಾರೆ.
ಕಾರ್ಯಕರ್ತರು ಮತ್ತು ಬೆಂಬಲಿಗರ ಸಭೆ ನಡೆಸಿದ್ದೇನೆ. ರವಿವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ, ಮುಂದೆ ನೀಡುತ್ತೇನೆ. ಬೆಂಬಲಿಗರು ಮತ್ತು ಕಾರ್ಯಕರ್ತರ ನಡುವೆ ನಾನು ಜೆಡಿಎಸ್‌ನಿಂದ ಸ್ಪರ್ಧಿಸಬೇಕಾ ಅಥವಾ ಪಕ್ಷೇತರನಾಗಿ ಸ್ಪರ್ಧಿಸಬೇಕಾ ಎಂಬುದರ ಕುರಿತಂತೆ ಗೊಂದಲವಿದೆ ಎಂದರು.