ಹಾವೇರಿ :ಉಕ್ರೇನ್ನಲ್ಲಿ ಮೃತಪಟ್ಟ ನವೀನ್ ಪಾರ್ಥಿವ ಶರೀರ ನಾಳೆ(ಸೋಮವಾರ) ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿಗೆ ಆಗಮಿಸಲಿದೆ. ಈ ಹಿನ್ನೆಲೆಯಲ್ಲಿ ನವೀನ್ ನಿವಾಸಕ್ಕೆ ಹಾವೇರಿ ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಭೇಟಿ ನೀಡಿದರು. ಅಲ್ಲದೇ, ಪೂಜೆ, ಸಾರ್ವಜನಿಕ ದರ್ಶನದ ವ್ಯವಸ್ಥೆ ಸೇರಿ ವಿವಿಧ ವಿಚಾರಗಳ ಕುರಿತು ಕುಟುಂಬಸ್ಥರ ಜತೆ ಚರ್ಚಿಸಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಸಂಜಯ್ ಶೆಟ್ಟೆಣ್ಣವರ್, ನಾಳೆ ಬೆಳಗಿನ ಜಾವ ನವೀನ್ ಮೃತದೇಹ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರಲಿದೆ. ರಾಣೆಬೆನ್ನೂರು ತಹಶೀಲ್ದಾರ್ ಹಾಗೂ ನವೀನ್ ಸಹೋದರ ಮತ್ತು ಗ್ರಾಮದ ಕೆಲವರು ಪಾರ್ಥಿವ ಶರೀರ ಬರಮಾಡಿಕೊಳ್ಳಲು ಬೆಂಗಳೂರಿಗೆ ತೆರಳಲಿದ್ದಾರೆ. ನಿಲ್ದಾಣದಿಂದ ಆ್ಯಂಬುಲೆನ್ಸ್ ಮೂಲಕ ಮೃತದೇಹ ತರುವ ವ್ಯವಸ್ಥೆ ಮಾಡಲಾಗಿದೆ ಎಂದರು.