ಹಾವೇರಿ : ದೇಶಾದ್ಯಂತ ಶರನ್ನಾವರಾತ್ರಿಯ ಸಂಭ್ರಮ ನಿನ್ನೆಯಿಂದ ಆರಂಭವಾಗಿದೆ. ಹಾವೇರಿಯ ನವದುರ್ಗೆಯರ ದೇವಸ್ಥಾನದಲ್ಲಿ ಸಹ ನವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಇಡೀ ದೇಗುಲವೇ ಪುಷ್ಪಾಲಂಕಾರದಿಂದ ಕಂಗೊಳಿಸುತ್ತಿದೆ.
ಹೌದು, ಈ ದೇವಸ್ಥಾನದ ಒಂದೇ ಗರ್ಭಗುಡಿಯಲ್ಲಿ 9 ದುರ್ಗೆಯರನ್ನು ಸ್ಥಾಪನೆ ಮಾಡಿರುವುದು ವಿಶೇಷ. ನವರಾತ್ರಿಯ ದಿನಗಳಲ್ಲಿ ಪ್ರತಿನಿತ್ಯ ಒಂದೊಂದು ದುರ್ಗಾ ಮಾತೆಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ. ಮೊದಲ ದಿನ ಶೈಲಪುತ್ರಿ, ಎರಡನೇಯ ದಿನ ಬ್ರಹ್ಮಚಾರಿಣಿ, ಮೂರನೇ ದಿನ ಚಂದ್ರಘಂಟಾ, ನಾಲ್ಕನೇ ದಿನ ಕೂಷ್ಮಾಂಡಾ, ಐದನೇ ದಿನ ಸ್ಕಂದಮಾತಾ, ಆರನೇ ದಿನ ಕಾತ್ಯಾಯಿನಿ, ಏಳನೇ ದಿನ ಕಾಲರಾತ್ರಿ, ಎಂಟನೇಯ ದಿನ ಮಹಾಗೌರಿಗೆ ಪೂಜೆ ಸಲ್ಲಿಸಿದರೆ 9ನೇ ದಿನ ಸಿದ್ಧಿದಾತ್ರಿಗೆ ಪೂಜೆ ಸಲ್ಲಿಸಲಾಗುತ್ತದೆ.
ಮೊದಲ ದಿನವಾದ ಭಾನುವಾರ ಶೈಲಪುತ್ರಿಗೆ ಪೂಜೆ ಸಲ್ಲಿಸಲಾಯಿತು. ಕುಂಕುಮಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಮೂಲ ದೇವಸ್ಥಾನವನ್ನು ಹಕ್ಕಲಮರಿಯಮ್ಮ ದೇವಸ್ಥಾನವೆಂದು ಕರೆಯಲಾಗುತ್ತದೆ. ಅಲ್ಲದೇ, ದೇವಸ್ಥಾನದಲ್ಲಿ ಸುಮಾರು 37 ದೇವರ ಮೂರ್ತಿಗಳನ್ನು ಸ್ಥಾಪಿಸಲಾಗಿದೆ. ಇದಕ್ಕೆ ದೇವಿ ಪಂಚಾಯತ್ ಎಂದು ಕರೆಯಲಾಗುತ್ತಿದ್ದು, ಪ್ರತಿನಿತ್ಯ ಎಲ್ಲ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಇನ್ನು ದೇವಸ್ಥಾನದಲ್ಲಿ ನವಗ್ರಹಗಳನ್ನು ಸ್ಥಾಪಿಸಲಾಗಿದ್ದು, ನವ ವೃಕ್ಷಗಳನ್ನು ನೆಡಲಾಗಿದೆ. ನವರಾತ್ರಿಯ ಈ ದಿನಗಳಂದು ಭಕ್ತ ಸಾಗರವೇ ಇಲ್ಲಿಗೆ ಹರಿದು ಬರುತ್ತದೆ. ಪ್ರತಿನಿತ್ಯ ಒಂದೊಂದು ದುರ್ಗೆಯರಿಗೆ ಪೂಜೆ ಸಲ್ಲಿಸಿ, ಇಷ್ಟಾರ್ಥ ಈಡೇರುವಂತೆ ದುರ್ಗೆಯರಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
ರಾಜ್ಯದಲ್ಲಿ ಒಂದೇ ಗರ್ಭಗುಡಿಯಲ್ಲಿ ನವದುರ್ಗೆಯರು ಮೂರ್ತಿಗಳಿರುವ ದೇವಸ್ಥಾನಗಳು ತುಂಬಾ ವಿರಳ. ಒಂದು ಮಂಗಳೂರಿನಲ್ಲಿ ಇದ್ದರೆ ಇನ್ನೊಂದು ಹಾವೇರಿಯಲ್ಲಿದೆ. ಈ ವಿಶೇಷ ದೇವಾಲಯ ಹಾವೇರಿಯಲ್ಲಿ ಸ್ಥಾಪನೆಯಾಗಿರುವುದು ನಮ್ಮ ಪುಣ್ಯ ಎನ್ನುತ್ತಾರೆ ಸ್ಥಳೀಯ ಭಕ್ತರು.