ರಾಣೆಬೆನ್ನೂರು (ಹಾವೇರಿ): ಜಮೀನುಗಳಲ್ಲಿ ಬದು ನಿರ್ಮಾಣ ಕಾಮಗಾರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ತಾಲೂಕಿನ ಚಿಕ್ಕಹರಳಹಳ್ಳಿ ನರೇಗಾ ಕೂಲಿ ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಜಮೀನುಗಳಲ್ಲಿ ಬದು ನಿರ್ಮಾಣ ಕಾಮಗಾರಿ ಮಾಡಲು ಮುಂದಾಗಿದ್ದೇವೆ. ಆದರೆ ಆಯಾ ಜಮೀನುಗಳ ರೈತರು ನಾವೇ ಬದು ನಿರ್ಮಾಣ ಮಾಡಿಕೊಳ್ಳುತ್ತೇವೆ ಎಂದು ಹೇಳಿ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಡುತ್ತಿಲ್ಲ. ಆದ್ದರಿಂದ ಕೆಲಸವಿಲ್ಲದೇ ಖಾಲಿ ಕುಳಿತ್ತಿದ್ದೇವೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ನಮಗೆ ನರೇಗಾ ಕಾಮಗಾರಿ ಹೊರತುಪಡಿಸಿ ಬೇರೆ ಯಾವುದೇ ಕೆಲಸವಿಲ್ಲ. ಇಲ್ಲಿ ಕೆಲಸ ಮಾಡಿದರೆ ಸಂಬಳ ಬರುತ್ತದೆ. ಇಲ್ಲವಾದರೆ ಜೀವನ ನಡೆಸುವುದು ಕಷ್ಟವಾಗಲಿದೆ. ಆದ್ದರಿಂದ ಕೆಲಸ ಮಾಡಲು ಅವಕಾಶ ಮಾಡಿಕೊಡಬೇಕು. ತಾಪಂ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ವಿಷಯ ತಿಳಿದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಂ.ಕಾಂಬಳೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಳೆಗಾಲ ಆರಂಭವಾಗುವ ಕಾರಣ ಜಮೀನುಗಳಿಗೆ ಬದು ನಿರ್ಮಾಣ ಅವಶ್ಯವಿದೆ. ಆದ್ದರಿಂದ ಕಾಮಗಾರಿ ನಡೆಸಲು ಅನುಕೂಲ ಮಾಡಿಕೊಡಿ ಎಂದು ರೈತರ ಮನವೊಲಿಸಿದರು. ಇದಕ್ಕೆ ರೈತರು ಸಮ್ಮತಿಸಿದರು. ನಂತರ ಕೂಲಿ ಕಾರ್ಮಿಕರು ಪ್ರತಿಭಟನೆ ಕೈಬಿಟ್ಟು ಕೆಲಸ ಆರಂಭಿಸಿದರು.