ಹಾವೇರಿ: ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಯಿತು. ಕೆಲವರು ಮನೆಯಲ್ಲಿನ ಮಣ್ಣಿನ ನಾಗರ ಪ್ರತಿಮೆಗೆ ಹಾಲೆರೆದರೆ, ಇನ್ನೂ ಕೆಲವರು ಮನೆಯ ದೇವರ ಜಗುಲಿ ಮೇಲೆ ನಾಗರ ಮೂರ್ತಿ ಇಟ್ಟು ಹಾಲೆರೆದು ಪೂಜೆ ಸಲ್ಲಿಸಿದರು.
ಹಾವೇರಿಯಲ್ಲಿ ಮನೆಮಾಡಿದ ನಾಗರ ಪಂಚಮಿ ಹಬ್ಬದ ಸಡಗರ ಹೊಸ ಉಡುಪುಗಳನ್ನು ಧರಿಸಿದ ಮಹಿಳೆಯರು ಮುಂಜಾನೆಯಿಂದಲೇ ನಾಗಬನಗಳಿಗೆ ತೆರಳಿ ನಾಗಪ್ಪನಿಗೆ ಹಾಲೆರೆದರು. ನಾಗರ ಪ್ರತಿಮೆಯನ್ನು ವಿವಿಧ ಪೂಜಾ ಸಾಮಾಗ್ರಿಗಳಿಂದ ಅಲಂಕಾರ ಮಾಡಿದರು. ಮನೆಯ ಸದಸ್ಯರು ಅಣ್ಣ-ತಮ್ಮಂದಿರ ಹೆಸರಿನಲ್ಲಿ ನಾಗಪ್ಪನಿಗೆ ಹಾಲೆರೆದರು.
ಎಳ್ಳು ಸೇರಿದಂತೆ ವೈವಿದ್ಯಮಯ ಉಂಡೆಗಳನ್ನು ನಾಗಪ್ಪನಿಗೆ ನೈವಿದ್ಯಕ್ಕೆ ಇಡಲಾಗಿತ್ತು. ಪೂಜೆ ಸಲ್ಲಿಸಿದ ಮಹಿಳೆಯರು ಪ್ರಸ್ತುತ ವರ್ಷ ಕೊರೊನಾ ಇದೆ. ಹಿಂದಿನ ಸಂಭ್ರಮವಿಲ್ಲ. ಆದರೂ ನಾಗಪ್ಪನಿಗೆ ನಾವು ಪ್ರತಿವರ್ಷ ಪೂಜೆ ಮಾಡುವಂತೆ ಮಾಡಿದ್ದೇವೆ. ನಾಗಪ್ಪ ಆದಷ್ಟು ಬೇಗ ವಿಶ್ವವನ್ನ ಕೊರೊನಾ ಮುಕ್ತಗೊಳಿಸಲಿ ಎಂದು ಬೇಡಿಕೊಂಡರು.
ಜೋಕಾಲಿ ಜೀವನದ ಏಳು-ಬೀಳುಗಳ ಸಂಕೇತ: ಮರಗಳಿಗೆ ಕಟ್ಟಿದ ಜೋಕಾಲಿಗಳಲ್ಲಿ ಯುವಕರು ಸೇರಿದಂತೆ ಗೃಹಿಣಿಯರು ಜೋಕಾಲಿ ಆಡಿ ಸಂತಸ ವ್ಯಕ್ತಪಡಿಸಿದರು. ಪ್ರತಿವರ್ಷದಂತೆ ಈ ವರ್ಷ ಸಹ ಜೋಕಾಲಿಯಾಡುತ್ತಿದ್ದೇವೆ. ಜೋಕಾಲಿ ಜೀವನದ ಏಳು-ಬೀಳುಗಳ ಸಂಕೇತ. ಮೇಲೆ ಹೋದಾಗ ಬೀಗಬಾರದು, ಕೆಳಗೆ ಬಂದಾಗ ಕುಗ್ಗಬಾರದು ಎನ್ನುವ ಸಂಕೇತವೇ ಜೋಕಾಲಿಯಾಗಿದೆ ಎಂದು ಮಂಜುಳಾ ಚಂದ್ರಗಿರಿ ಅಭಿಪ್ರಾಯ ವ್ಯಕ್ತಪಡಿಸಿದರು.