ಹಾವೇರಿ/ವಿಜಯನಗರ:ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಮೈಲಾರ ಲಿಂಗೇಶ್ವರ ಜಾತ್ರೆ ಅದ್ಧೂರಿಯಾಗಿ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಕಾರ್ಣಿಕೋತ್ಸವ ನಡೆಯಿತು. ಗ್ರಾಮದ ಡೆಂಕನಮರಡಿಯಲ್ಲಿ ಗೊರವಯ್ಯ ರಾಮಪ್ಪಜ್ಜ ಪ್ರಸ್ತುತ ವರ್ಷದ ಕಾರ್ಣಿಕ ನುಡಿದರು.
ಭವಿಷ್ಯವಾಣಿ ಎಂಬುದು ಭಕ್ತರ ನಂಬಿಕೆ:ಸುಮಾರು 14 ಅಡಿ ಬಿಲ್ಲೇನೇರಿದ ಗೊರವಯ್ಯ ರಾಮಪ್ಪಜ್ಜ 'ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್' ಎಂದು ಕಾರ್ಣಿಕ ನುಡಿದು ಮೇಲಿನಿಂದ ಕಳಕ್ಕೆ ಧುಮುಕಿದರು. ಮೇಲಿನಿಂದ ಧುಮುಕಿದ ಗೊರವಯ್ಯ ರಾಮಪ್ಪಜ್ಜನನ್ನು ಭಕ್ತರು ಕೆಳಗೆ ಬೀಳದಂತೆ ಹಿಡಿದರು. ಸುಮಾರು 11 ದಿನಗಳ ಕಾಲ ಉಪವಾಸವಿರುವ ರಾಮಪ್ಪಜ್ಜ ಕೇವರ ಭಂಡಾರದ ನೀರು ಮಾತ್ರ ಸೇವಿಸುತ್ತಾರೆ. ಅಲ್ಲದೆ ಮೌನಿಯಾಗಿರುವ ರಾಮಪ್ಪಜ್ಜ ಕಾರ್ಣಿಕ ನುಡಿಯುವ ಮೊದಲು ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅಪ್ಪಣೆ ಪಡೆದು ಕಾರ್ಣಿಕ ನುಡಿಯುತ್ತಾರೆ. ಈ ಕಾರ್ಣಿಕವನ್ನು ಪ್ರಸ್ತುತ ವರ್ಷದ ಭವಿಷ್ಯವಾಣಿಯಂದು ಭಕ್ತರು ನಂಬುತ್ತಾರೆ.
ಕಾರ್ಣಿಕ ವಾಣಿ ಅರ್ಥವೇನು? : ಕಾರ್ಣಿಕದ ಮೇಲೆ ರಾಜ್ಯದ ಕೃಷಿ ಹಾಗೂ ರಾಜಕೀಯ ವಿಚಾರಗಳನ್ನು ವಿಶ್ಲೇಷಣೆ ಮಾಡಲಾಗುತ್ತದೆ. ಸ್ವತಃ ಮೈಲಾರಲಿಂಗನೇ ಗೊರವಪ್ಪನ ರೂಪದಲ್ಲಿ ಭವಿಷ್ಯವಾಣಿ ನುಡಿಯುತ್ತಾನೆ. ಇದು ದೈವವಾಣಿ ಎಂಬುದು ಭಕ್ತರು ನಂಬಿಕೆ. ಗೊರವಪ್ಪ ಕಾರ್ಣಿಕ ನುಡಿಯುತ್ತಿದ್ದಂತೆ ಅದರ ವಿಶ್ಲೇಷಣೆ ಮಾಡಲಾಗುತ್ತದೆ. ಪ್ರಸ್ತುತ ವರ್ಷದ ಕಾರ್ಣಿಕ ವಾಣಿ ವಿಶ್ಲೇಷಣೆ ಮಾಡಿದ ಧರ್ಮಾಧಿಕಾರಿ ವೆಂಕಪ್ಪಯ್ಯ ಒಡೆಯರ್, "ಕಾರ್ಣಿಕದ ಪ್ರಕಾರ ಉತ್ತಮ ಮಳೆಯಾಗುತ್ತದೆ. ರೈತರು ಸುಭೀಕ್ಷೆಯಿಂದ ಇರಲಿದ್ದಾರೆ. ನಿಷ್ಠೆ ಮತ್ತು ಪ್ರಾಮಾಣಿಕ ವ್ಯಕ್ತಿ ರಾಜ್ಯಭಾರ ಮಾಡಲಿದ್ದಾರೆ" ಎಂದು ತಿಳಿಸಿದರು.
ಈ ರೀತಿಯ ಕಾರ್ಣಿಕಗಳನ್ನು ಹಲವು ವರ್ಷಗಳ ಹಿಂದಿನಿಂದ ಕೇತ್ರದಲ್ಲಿ ಹೇಳುತ್ತ ಬರಲಾಗುತ್ತಿದೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ಪ್ರಾಮಾಣಿಕ ವ್ಯಕ್ತಿ ಆಡಳಿತ ನಡೆಸಿಲಿದ್ದಾರೆ. ರೈತರಿಗೆ ಮಳೆ ಬೆಳೆ ಚೆನ್ನಾಗಿ ಆಗಲಿದೆ ಎಂಬ ಮೂನ್ಸೂಚನೆಯನ್ನ ಮೈಲಾರಲಿಂಗ ತಿಳಿಸಿದ್ದಾನೆ ಎಂದು ವೆಂಕಪ್ಪಯ್ಯ ಒಡೆಯರ್ ವಿಶ್ಲೇಷಣೆ ಮಾಡಿದರು. ಕಾರ್ಣಿಕ ನುಡಿ ಕೇಳಿದ ನಂತರ ಮಾಜಿ ಸಚಿವ ಬಸವರಾಜ ಶಿವಣ್ಣನವರ್ ಸಂತಸ ವ್ಯಕ್ತಪಡಿಸಿದರು. ಪ್ರಸ್ತುತ ವರ್ಷ ಒಳ್ಳೆಯ ಕಾರ್ಣಿಕವಾಗಿದೆ. ರೈತರು ಊಟ ಮಾಡಿ ಹಳಸುವಷ್ಟು ಮಳೆ ಬೆಳೆ ಬರಲಿದೆ. ಕಂಬಳಿ ಬೀಸಿತಲೆ ಎಂದರೇ ವಿಶೇಷವಾಗಿ ಉತ್ತಮ ವ್ಯಕ್ತಿ ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬುದು ದೈವ ವಾಣಿಯಾಗಿದೆ ಎಂದು ಬಸವರಾಜ್ ಶಿವಣ್ಣನವರ್ ತಿಳಿಸಿದರು.