ಕರ್ನಾಟಕ

karnataka

ETV Bharat / state

ಬಸವಜಯ ಮೃತ್ಯುಂಜಯಶ್ರೀಗಳು ಸಿಎಂ ಮನೆಗೆ ಮುತ್ತಿಗೆ ಹಾಕುವ ವಿಚಾರ ಗೊತ್ತಿಲ್ಲ: ವಚನಾನಂದ ಶ್ರೀಗಳು - ಹರಿಹರ ಪೀಠದ ವಚನಾನಂದ ಶ್ರೀಗಳು

ಪಂಚಮಸಾಲಿಗಳಿಗೆ 2 ಎ ಮೀಸಲಾತಿ ಹೋರಾಟ - ಹರಜಾತ್ರೆಗೆ ಆಗಮಿಸುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು 2ಎ 2ಡಿ ಸ್ಪಷ್ಟ ನಿರ್ಧಾರ ಪ್ರಕಟಿಸುವರು - ಹರಿಹರ ಪೀಠದ ವಚನಾನಂದ ಶ್ರೀ ವಿಶ್ವಾಸ

Shri Vachana nanda of Harihara
ಹರಿಹರ ಪೀಠದ ವಚನಾನಂದ ಶ್ರೀಗಳು

By

Published : Jan 12, 2023, 6:29 PM IST

ಹಾವೇರಿ: ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯಶ್ರೀಗಳು ಪಂಚಮಸಾಲಿಗಳಿಗೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಶುಕ್ರವಾರ ಹಾವೇರಿ ಜಿಲ್ಲೆ ಶಿಗ್ಗಾಂವಿಯ ಸಿಎಂ ಮನೆಗೆ ಮುತ್ತಿಗೆ ಹಾಕುವ ವಿಚಾರ ತಮಗೆ ಗೊತ್ತಿಲ್ಲ ಎಂದು ಹರಿಹರ ಪೀಠದ ವಚನಾನಂದ ಶ್ರೀಗಳು ತಿಳಿಸಿದ್ದಾರೆ.

ಹಾವೇರಿಯಲ್ಲಿ ಮಾತನಾಡಿದ ಅವರು, ತಾವು ಹರಿಹರದಲ್ಲಿ ಇದೇ 14 ಮತ್ತು 15 ರಂದು ನಡೆಯುತ್ತಿರುವ ಹರಜಾತ್ರೆಯಲ್ಲಿ ಸರ್ಕಾರ ಸ್ಪಷ್ಟ ನಿರ್ಧಾರ ನೀಡುತ್ತೆ ಎಂಬ ವಿಶ್ವಾಸ ತಮಗೆ ಇದೆ ಎಂದ ಅವರು, 14 ಮತ್ತು 15 ರಂದು ಹರಿಹರದಲ್ಲಿ ನಡೆಯಲಿರುವ ಹರಜಾತ್ರೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಆ ಹರಜಾತ್ರೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ 2ಎ ಮತ್ತು 2ಡಿ ಬಗ್ಗೆ ನಿರ್ಧಾರ ಪ್ರಕಟಿಸುವರು ಎಂದು ಸ್ಪಷ್ಟತೆ ನೀಡಿದರು.

ಹರಿಹರಪೀಠ ಮತ್ತು ಕೂಡಲಸಂಗಮ ಪೀಠಗಳ ವಿಭಿನ್ನ ಹೋರಾಟ ಮಾರ್ಗಗಳು ಭಕ್ತರಿಗೆ ಗೊಂದಲ ಮೂಡಿಸುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಭಕ್ತರು ಜಾಣರಿದ್ದಾರೆ. ಯಾವುದು ತಪ್ಪು, ಯಾವುದು ಸರಿ ಎನ್ನುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದು ವಚನಾನಂದ ಶ್ರೀಗಳು ಹೇಳಿದರು. ಈಗ ಪ್ರವರ್ಗ 1 ಪ್ರವರ್ಗ 2 ಮತ್ತು ಪ್ರವರ್ಗ 3 ಇದ್ದವು. 2009ರ ವರೆಗೆ ಪಂಚಮಸಾಲಿಗಳು ಸಾಮಾನ್ಯ ವರ್ಗದಲ್ಲಿ ಇದ್ದು, ಒಬಿಸಿಯಲ್ಲಿಯೇ ಇರಲಿಲ್ಲ. ಪಂಚಮಸಾಲಿಗಳಿಗೆ ಒಬಿಸಿ ನೀಡಿ ಎಂದು 1994 ರಿಂದಲೇ ಹೋರಾಟ ಆರಂಭವಾಗಿತ್ತು. ಅದು ತಾರ್ಕಿಕ ಅಂತ್ಯವಾಗಿದ್ದು 2009ರಲ್ಲಿ ಎಂದು ಸ್ವಾಮೀಜಿ ತಿಳಿಸಿದರು.

ಗೆಜೆಟ್​ ನೋಟಿಫಿಕೇಷನ್​ ಆಗಿದ್ದು 2009ರಲ್ಲಿ:2009 ರಲ್ಲಿ ಗೆಜೆಟ್ ನೋಟಿಪಿಕೇಶನ್ ಮಾಡಿ ಪಂಚಮ ಸಾಲಿಗಳನ್ನು ಪ್ರವರ್ಗ 3ಬಿ ಗೆ ಸೇರಿಸಲಾಯಿತು. ಮೊಟ್ಟ ಮೊದಲ ಬಾರಿಗೆ ಪಂಚಮ ಸಾಲಿಗಳನ್ನು ಜಾತಿಪಟ್ಟಿಯಲ್ಲಿ ತಂದು 3ಬಿಯಲ್ಲಿ ಗುರುತಿಸಿದ್ದು 2009 ರಲ್ಲಿ. 2009 ರಲ್ಲಿ 2ಎ ಆಗಬೇಕಿತ್ತು. ಆದರೆ ಆಗಲಿಲ್ಲ ಅದಕ್ಕಾಗಿ ಹೋರಾಟ ಶುರುವಾಯಿತು. 2ಎ ಮೀಸಲಾತಿಗಾಗಿ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಮತ್ತು ಹರಿಹರಪೀಠ ಕಾನೂನಾತ್ಮಕವಾಗಿ ಸಂವಿಧಾನಾತ್ಮಕವಾಗಿ ನಿರಂತರ ಪ್ರಯತ್ನ ಮಾಡುತ್ತಾ ಬಂದಿದೆ ಎಂದು ಸ್ವಾಮೀಜಿ ಇದೇ ವೇಳೆ ಸ್ಪಷ್ಟಪಡಿಸಿದರು.

ಸರ್ಕಾರ ಮೊನ್ನೆ 2ಡಿ ಮಾಡಿದೆ. ಆದರೆ, ಅದರ ಬಗ್ಗೆ ಸಾಕಷ್ಟು ಮಾಹಿತಿ ಇಲ್ಲ. ಸರ್ಕಾರ ಅದರ ಬಗ್ಗೆ ಯಾವುದೇ ಸ್ಪಷ್ಟೀಕರಣ ಕೊಟ್ಟಿಲ್ಲ. ಅದರಲ್ಲಿ ಕೆಲವು ಗೊಂದಲಗಳಿವೆ. ಪ್ರತಿಶತ ಪ್ರಮಾಣವೆಷ್ಟು, ಹೇಗೆ ನೀಡುತ್ತಾರೆ ಎಂಬುದು ಗೊತ್ತಿಲ್ಲ ಎಂದು ವಚನಾನಂದಶ್ರೀಗಳು ಇದೇ ವೇಳೆ ತಿಳಿಸಿದರು. ಹರಜಾತ್ರೆಗೆ ಆಗಮಿಸುವ ಸಿಎಂ ಬಸವರಾಜ್ ಬೊಮ್ಮಾಯಿ ಅದಕ್ಕೆ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದ ಅವರು, ಸಿಎಂ ಬಸವರಾಜ್ ಬೊಮ್ಮಾಯಿ ಮೇಲೆ ನಮಗೆ ಭರವಸೆ ಇದೆ. ಹಿಂದುಳಿದ ವರ್ಗದ ಆಯೋಗಕ್ಕೆ ನಾವು ಸಂಪೂರ್ಣ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಕೋರಿದ್ದೇವೆ. 900 ಪುಟಗಳ ದಾಖಲಾತಿ ಕೊಟ್ಟಿದ್ದೇವೆ ಎಂದು ಶ್ರೀಗಳು ಇದೇ ವೇಳೆ ಮಾಹಿತಿ ನೀಡಿದರು.

ಆಯೋಗ ಈಗಾಗಲೇ ಮಧ್ಯಂತರ ವರದಿ ನೀಡಿದೆ. ಸರ್ಕಾರ ವರದಿ ತರಿಸಿಕೊಂಡು ಮೀಸಲಾತಿ ಪ್ರಕಟಿಸುವಂತೆ ಕೇಳಿದ್ದೇವೆ. ಅದರಂತೆ ಸರ್ಕಾರ ತನ್ನದೇ ಆದ ಯೋಚನೆಯಲ್ಲಿ 2ಡಿ ಮಾಡಿದೆ. ಸರ್ಕಾರದ 2ಡಿ ಮೀಸಲಾತಿಯನ್ನು ಸ್ವಾಗತವೂ ಮಾಡಿಲ್ಲ ಮತ್ತು ವಿರೋಧವನ್ನೂ ಸಹ ಮಾಡಿಲ್ಲ. ಇದೇ 14 ರಂದು ಕ್ಷೇತ್ರಕ್ಕೆ ಬರಲಿರುವ ಸಿಎಂ ಬಸವರಾಜ್ ಬೊಮ್ಮಾಯಿ ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಎಲ್ಲ ಲಿಂಗಾಯತರಿಗೆ ಕೇಂದ್ರದ ಒಬಿಸಿ ಮೀಸಲಾತಿ ಸಿಗಬೇಕು. ಹಲವು ಸಮುದಾಯಗಳು ಈಗಾಗಲೇ ಕೇಂದ್ರದ ಒಬಿಸಿ ಪಟ್ಟಿಯಲ್ಲಿವೆ. ಆದರೆ, ನಮ್ಮದು ರಾಜ್ಯದ ಒಬಿಸಿಯಲ್ಲಿದೆ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾದರೆ ನಮಗೆ ಹೆಚ್ಚು ಅನುಕೂಲಗಳು ಸಿಗಲಿವೆ. ಯುಪಿಎಸ್ಸಿ ನೀಟ್ ಮೆಡಿಕಲ್, ಐಎಎಸ್ ಐಪಿಎಸ್ ಐಎಫ್ಎಸ್ ಪರೀಕ್ಷೆ ಬರೆಯಲು ಅನುಕೂಲವಾಗುತ್ತೆ ಎಂದರು.

ಸಮುದಾಯ ಕೇಂದ್ರದ ಒಬಿಸಿ ಮೀಸಲಾತಿಯಲ್ಲಿ ಇಲ್ಲದಿರುವ ಕಾರಣದಿಂದ ಉತ್ತರ ಭಾರತದವರು ಹೆಚ್ಚು ಐಎಎಸ್ ಐಪಿಎಸ್ ಆದವರು ರಾಜ್ಯಕ್ಕೆ ಬರುತ್ತಿದ್ದಾರೆ. ಪಂಚಮಸಾಲಿ ಸೇರಿದಂತೆ ಲಿಂಗಾಯತ ಎಲ್ಲ ಪಂಗಡಗಳನ್ನು ಕೇಂದ್ರದ ಒಬಿಸಿಯಲ್ಲಿ ಸೇರಿಸಿ ಎಂದು 2003 ರಲ್ಲಿ ಪಂಚಮಸಾಲಿ ಸಂಘ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಗೆ ಮನವಿ ನೀಡಿತ್ತು. ಶಾಸಕ ಬಸನಗೌಡ ಯತ್ನಾಳ ತಮ್ಮನ್ನು ಲಘುವಾಗಿ ಟೀಕಿಸುವ ಬಗ್ಗೆ ಮಾತನಾಡಿದ ವಚನಾನಂದ ಶ್ರೀಗಳು, ಲಘುವಾಗಿ ಮಾತನಾಡುವವರನ್ನು ಜನ ಲಘುವಾಗಿ ಬಿಟ್ಟುಬಿಡಬೇಕು ಎಂದು ತಿರುಗೇಟು ನೀಡಿದರು.

ಇದನ್ನೂಓದಿ:ಈ ಬಾರಿ ಮಹಿಳೆಯರಿಗೆ ಹೆಚ್ಚು ಟಿಕೆಟ್ ನೀಡುವಂತೆ ಪ್ರಿಯಾಂಕಾ ಗಾಂಧಿಗೆ ಮನವಿ: ಉಮಾಶ್ರೀ

ABOUT THE AUTHOR

...view details