ಹಾವೇರಿ: 'ಉತ್ತರ ಕರ್ನಾಟಕದ ಹೆಬ್ಬಾಗಿಲು' ಎಂದು ಕರೆಯುವ ಹಾವೇರಿ ಜಿಲ್ಲೆ ಬಹುತೇಕ ಅರೆಮಲೆನಾಡು ಪ್ರದೇಶ. ಇಲ್ಲಿಯ ರೈತರು ಮುಂಗಾರು ಮಳೆಯನ್ನೇ ಅವಲಂಭಿಸಿ ಕೃಷಿ ಚಟುವಟಿಕೆ ಆರಂಭಿಸುತ್ತಾರೆ. ಜಿಲ್ಲೆಯ ಪ್ರತಿಶತ 10ರಷ್ಟು ರೈತರು ಪೂರ್ವ ಮುಂಗಾರು ಮಳೆಯನ್ನ ಅವಲಂಬಿಸಿದ್ದಾರೆ.
ಮುಂಗಾರು ಮಳೆ ಬರುವ ಮುನ್ನ ಪೂರ್ವ ಮಳೆಯಲ್ಲಿ ಜಮೀನು ಹದವಾಗಿಟ್ಟುಕೊಂಡು ಬಿತ್ತನೆ ಮಾಡುತ್ತಾರೆ. ಈ ರೀತಿ ಬಿತ್ತನೆ ಮಾಡಿದ ಬೀಜಗಳಿಗೆ ಮುಂಗಾರು ಮಳೆ ಆಗಮನ ಮತ್ತಷ್ಟು ಉತ್ತೇಜನ ನೀಡಿ ಉತ್ತಮ ಬೆಳೆ ಬರುತ್ತದೆ. ಅದರಂತೆ ಈ ವರ್ಷ ಸಹ ಮುಂಗಾರು ಪೂರ್ವದಲ್ಲಿ ಜಮೀನು ಹದವಾಗಿಟ್ಟುಕೊಂಡು ಮುಂಗಾರಿನ ಮುನ್ನವೇ ಗೋವಿನಜೋಳ, ಸೋಯಾಬಿನ್ ಹತ್ತಿ ಸೇರಿದಂತೆ ವಿವಿಧ ಬೆಳೆಗಳ ಬೀಜಗಳನ್ನ ಭೂಮಿಯಲ್ಲಿ ಬಿತ್ತನೆ ಮಾಡಿದ್ದಾರೆ.
ಬೀಜಗಳು ಸಹ ಮೊಳಕೆ ಬಂದಿವೆ. ಆದರೆ ನಿಗದಿತ ಸಮಯದಲ್ಲಿ ಮುಂಗಾರು ಮಳೆ ಬಾರದಿರುವುದು ಈ ರೀತಿ ಮೊಳಕೆಯೊಡೆದ ಬೀಜಗಳಿಗೆ ನೀರಿನಾಂಶದ ಕೊರತೆಯುಂಟಾಗಿದೆ. ಇದರಿಂದ ಬೀಜಗಳು ಅಲ್ಲಿಯೇ ಹಾಳಾಗಲಾರಂಭಿಸಿವೆ. ಪರಿಣಾಮ ಸಹಸ್ರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿದ ಗೋವಿನ ಜೋಳ ಸೋಯಾಬಿನ್ ಮತ್ತು ಹತ್ತಿ ಬೀಜ ಹುಟ್ಟುವ ಮುನ್ನವೇ ಕಮರಲಾರಂಭಿಸಿದೆ.
ಸಂಕಷ್ಟದಲ್ಲಿ ಅನ್ನದಾತರು:ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮತ್ತು ಮುಂಗಾರು ಮಳೆ ಅವಲಂಭಿಸಿ ಬೆಳೆ ಬೆಳೆಯಲು ಮುಂದಾಗಿದ್ದ ರೈತರು ಸಂಕಷ್ಟದಲ್ಲಿದ್ದಾರೆ. ಇನ್ನೇನು ಮುಂಗಾರು ಮಳೆ ಬಂತು ಎನ್ನುವಷ್ಟರಲ್ಲಿ ಚಂಡಮಾರುತ ಹಾವಳಿ ಮುಂಗಾರು ಮಳೆಯನ್ನು ವಿಳಂಬ ಮಾಡಿದೆ. ಕಳೆದ ವರ್ಷ ಅತಿಯಾದ ಮಳೆ ರೈತರ ಬದುಕನ್ನು ಸಂಕಷ್ಟಕ್ಕೆ ದೂಡಿತ್ತು. ಆದರೆ, ಈ ವರ್ಷ ತಡವಾದ ಮುಂಗಾರು ಮಳೆ ಮತ್ತೆ ರೈತರನ್ನ ಸಂಕಷ್ಟಕ್ಕೆ ಸಿಲುಕಿಸಿದೆ.