ಹಾವೇರಿ: ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ಅವರ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಹಾವೇರಿ ಜಿಲ್ಲಾಧಿಕಾರಿ ರಘುನಂದನ ಮೂರ್ತಿ ಅಸಿಂಧುಗೊಳಿಸಿದ್ದಾರೆ. ಈ ಕುರಿತಂತೆ ಆದೇಶ ಹೊರಡಿಸಿರುವ ಅವರು, ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ.
ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ಅವರು ಮೂಲತಃ ಜಂಗಮ ಜಾತಿಯವರಾಗಿದ್ದರು. ಆದರೆ, ಸರ್ಕಾರ ಬೇಡ ಜಂಗಮರಿಗೆ ಎಸ್ಸಿ ಪ್ರಮಾಣಪತ್ರ ನೀಡಲಾರಂಭಿಸುತ್ತಿದ್ದಂತೆ ಹಿರೇಮಠ ಸಹ ಬೇಡ ಜಂಗಮ ಪ್ರಮಾಣಪತ್ರವನ್ನು ಹಾವೇರಿ ತಹಶೀಲ್ದಾರ್ ಕಚೇರಿಯಿಂದ ಪಡೆದಿದ್ದರು.
ಹಾವೇರಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಸಲುವಾಗಿ ಜಾತಿ ಪ್ರಮಾಣಪತ್ರ ಪಡೆದಿದ್ದರು ಎನ್ನಲಾಗಿದೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಹಾವೇರಿ ವಿಧಾನಸಭಾ ಮೀಸಲು ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ರುದ್ರಪ್ಪ ಲಮಾಣಿ ಹೆಸರನ್ನು ಘೋಷಣೆ ಮಾಡಿತ್ತು. ಇದರ ಬೆನ್ನಲ್ಲೇ ಎಂ.ಎಂ.ಹಿರೇಮಠ ಕಾಂಗ್ರೆಸ್ ಜಿಲ್ಲಾಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಸಹ ರಾಜೀನಾಮೆ ಸಲ್ಲಿಸಿದ್ದರು. ಇದರ ಪ್ರತಿಯನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರಿಗೆ ರವಾನಿಸಿದ್ದರು. ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿ ಎರಡೇ ದಿನಕ್ಕೆ ಈ ಬೆಳವಣಿಗೆ ನಡೆದಿತ್ತು.
ಇದನ್ನೂ ಓದಿ :ಕೈತಪ್ಪಿದ ಟಿಕೆಟ್.. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ ಎಂ ಹಿರೇಮಠ್ ರಾಜೀನಾಮೆ, ಹಲವರಲ್ಲಿ ಅಸಮಾಧಾನ