ಹಾವೇರಿ: ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆಗೆ ಮುಂದಾದ ಶಾಸಕ ಪ್ರಕಾಶ್ ಕೋಳಿವಾಡ ಹಾವೇರಿ: ರಾಜ್ಯದಲ್ಲಿ ಕೆಲವೆಡೆ ಮಳೆ ಇಲ್ಲದೆ ಬರದ ಛಾಯೆ ಆವರಿಸಿದೆ. ಅದೇ ರೀತಿ ಹಾವೇರಿ ಜಿಲ್ಲೆಯಲ್ಲಿಯೂ ಮಳೆ ಮಾಯವಾಗಿರುವ ಹಿನ್ನೆಲೆ ಪ್ರಾಯೋಗಿಕ ಮೋಡ ಬಿತ್ತನೆ ಕಾರ್ಯಕ್ಕೆ ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಮುಂದಾಗಿದ್ದಾರೆ. ತಮ್ಮ ಪಿಕೆಕೆ (ಪಕ್ಷಾತೀತ ಕಾಯಕದ ಕನಸು) ಸಂಸ್ಥೆ ಮೂಲಕ ನಾಳೆ (ಸೋಮವಾರ)ದಿಂದ ಮೂರು ದಿನಗಳ ಕಾಲ ಹಾವೇರಿ ಜಿಲ್ಲೆಯಲ್ಲಿ ಶಾಸಕ ಪ್ರಕಾಶ್ ಕೋಳಿವಾಡ ನೇತೃತ್ವದಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ.
ಈಗಾಗಲೇ ಮೋಡ ಬಿತ್ತನೆಗೆ ಕೇಂದ್ರ ಸರ್ಕಾರದ ಸಂಬಂಧಪಟ್ಟ ಇಲಾಖೆ ಅನುಮತಿ ನೀಡಿದೆ. ಹಾವೇರಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ನದಿಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ಮಳೆಯ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ಕಳೆದ ವರ್ಷವೂ ಸಹ ಮೋಡ ಬಿತ್ತನೆ ಮಾಡಲಾಗಿತ್ತು. ಶಾಸಕ ಹಾಗೂ ಉದ್ಯಮಿಯಾಗಿರುವ ಪ್ರಕಾಶ್ ಕೋಳಿವಾಡ ಅವರ ಬಳಿ ಮೋಡ ಬಿತ್ತನೆಗಾಗಿಯೇ ಸಿದ್ಧಪಡಿಸಿರೋ ವಿಶೇಷ ವಿಮಾನ ಇದೆ.
ಇನ್ನು ಪ್ರಕಾಶ ಕೋಳಿವಾಡ ಹಾವೇರಿ ಜಿಲ್ಲೆಯಾದ್ಯಂತ ಸ್ವಂತ ಖರ್ಚಿನಲ್ಲಿ ಮೋಡ ಬಿತ್ತನೆ ಮಾಡುತ್ತೇನೆ ತಿಳಿಸಿದ್ದಾರೆ. ಸೋಮವಾರ ಹುಬ್ಬಳ್ಳಿಯ ಏರ್ಪೋರ್ಟ್ನಿಂದ ಹಾರಲಿರುವ ವಿಮಾನ ಮೋಡ ಬಿತ್ತನೆ ಕಾರ್ಯವನ್ನು ಪ್ರಾರಂಭಿಸಲಿದೆ. ಸಚಿವ ಹೆಚ್ ಕೆ ಪಾಟೀಲ ಹಾಗೂ ಹಾವೇರಿ ಜಿಲ್ಲೆಯ ಶಾಸಕರು ಮೋಡ ಬಿತ್ತನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ. ಮೋಡ ಬಿತ್ತನೆ ಯಶಸ್ವಿಯಾದರೆ ಜಿಲ್ಲೆಯ ಮೆಕ್ಕೆಜೋಳ, ಹತ್ತಿ, ಶೇಂಗಾ ಬೆಳೆಯುವ ರೈತರಿಗೆ ಅನುಕೂಲವಾಗಲಿದೆ.
ಮೋಡ ಬಿತ್ತನೆ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ:ಇತ್ತೀಚಿಗೆ, ಮಂಡ್ಯದಲ್ಲಿ ಮೋಡ ಬಿತ್ತನೆ ವಿಚಾರವಾಗಿ ಮಾತನಾಡಿದ್ದ ಕೃಷಿ ಸಚಿವ ಚಲುವರಾಯಸ್ವಾಮಿ, ಈ ಹಿಂದೆ ಮೋಡ ಬಿತ್ತನೆ ಮಾಡಿದಾಗ ಸೂಕ್ತ ಪ್ರತಿಫಲ ಸಿಕ್ಕಿಲ್ಲ. ಆಗಸ್ಟ್ 30ರೊಳಗೆ ಹಳ್ಳಿಗಳನ್ನು ವೀಕ್ಷಣೆ ಮಾಡಿ ವರದಿ ನೀಡಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇವೆ. ಸೆಪ್ಟೆಂಬರ್ 4ರೊಳಗೆ ಬರ ಘೋಷಣೆ ಬಗ್ಗೆ ತೀರ್ಮಾನ ಮಾಡಿ, ಸೆಪ್ಟೆಂಬರ್ ಮೊದಲ ವಾರದಲ್ಲಿ ಬರಗಾಲ ಘೋಷಣೆ ಸಾಧ್ಯತೆ ಇದೆ. ಸದ್ಯಕ್ಕೆ ಮೋಡ ಬಿತ್ತನೆ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ತಿಳಿಸಿದ್ದರು.
ಇದನ್ನೂ ಓದಿ:Rain alert: ರಾಜ್ಯದಲ್ಲಿ ಭಾರಿ ಮಳೆ ಮುನ್ಸೂಚನೆ.. ಈ 6 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ