ರಾಣೆಬೆನ್ನೂರು(ಹಾವೇರಿ): ರಾಜ್ಯಾದ್ಯಂತ ಕೊರೊನಾ ಮಹಾಮಾರಿ ತಾಂಡವಾಡುತ್ತಿದ್ದು, ರಾಜ್ಯದಲ್ಲಿ ನಿಯಂತ್ರಣ ಮಾಡುವಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಶಾಸಕ ಹೆಚ್.ಕೆ.ಪಾಟೀಲ್ ಆರೋಪಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶ ಕೋಳಿವಾಡರ ಪಿಕೆಕೆ ಇನ್ಸಿಯೇಟಿವ್ ಅಡಿಯಲ್ಲಿ 'ಕಾಂಗ್ರೆಸ್ ಆರೋಗ್ಯ ಹಸ್ತ' ಎಂಬ ಕೃತಕ ಆಕ್ಸಿಜನ್ ಬಸ್ಗೆ ಚಾಲನೆ ನೀಡಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಸಂಪೂರ್ಣವಾಗಿ ಕೈ ಚೆಲ್ಲಿ ಕುಳಿತಿದೆ. ರೋಗಿಗಳಿಗೆ ಆಕ್ಸಿಜನ್ ನೀಡುವಲ್ಲಿ ತಾರತಮ್ಯ ಮಾಡುತ್ತಿದೆ. ರೋಗಿಗಳಿಗೆ ಆಕ್ಸಿಜನ್ ಕಡಿಮೆ ಪ್ರಮಾಣದಲ್ಲಿ ನೀಡುವುದರಿಂದ ರಾಜ್ಯದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ದಯಮಾಡಿ ಆಕ್ಸಿಜನ್ ಉಸ್ತುವಾರಿಯನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ವಹಿಸಿಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದರು.