ಹಾವೇರಿ : ತಾಲೂಕಿನ ನಾಗನೂರು ಗ್ರಾಮಸ್ಥರಿಗೆ ಮಳೆಗಾಲ ಬಂದರೆ ಸಾಕು ಆತಂಕ ಶುರುವಾಗುತ್ತೆ. ಇದಕ್ಕೆ ಕಾರಣ ಗ್ರಾಮದ ಪಕ್ಕ ಹಾದು ಹೋಗಿರುವ ವರದಾ ನದಿ. ವರದಾ ನದಿ ಮಳೆಗಾಲದಲ್ಲಿ ಮೈದುಂಬಿಕೊಳ್ಳುತ್ತಾಳೆ. ಮಳೆಗಾಲದಲ್ಲಿ ಗ್ರಾಮದ ಸುಮಾರು 150 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಲಾರಂಭಿಸುತ್ತದೆ. ಹಲವು ದಶಕಗಳಿಂದ ಗ್ರಾಮದಲ್ಲಿ ಈ ಸಮಸ್ಯೆ ಇದೆ. ಮಳೆಗಾಲದಲ್ಲಿ ಗಂಜಿಕೇಂದ್ರಗಳಿಗೆ ತೆರಳುವ ಗ್ರಾಮಸ್ಥರು ವರದಾ ಆರ್ಭಟ ಕಡಿಮೆಯಾದಂತೆ ಮತ್ತೆ ತಮ್ಮ ಮನೆಗಳಿಗೆ ಧಾವಿಸುತ್ತಾರೆ.
1960 ರಿಂದ ನಾಗನೂರು ಗ್ರಾಮದ ಸ್ಥಳಾಂತರ ನಡೆಯುತ್ತಲೆ ಇದೆ. ಅಂದು ಗ್ರಾಮದ ಹೊರವಲಯದಲ್ಲಿ ಪ್ಲಾಟ್ ನಿರ್ಮಾಣವಾಗಿದ್ದು, ಸಂಪೂರ್ಣ ಗ್ರಾಮ ಸ್ಥಳಾಂತರವಾಗಿಲ್ಲ. ಈ ವರ್ಷ ಸಹ ಗ್ರಾಮ ವರದಿಯ ಆಪೋಶನಕ್ಕೆ ಒಳಗಾಗಿದೆ. ಮಂಗಳವಾರ ಜಿಲ್ಲೆಯ ಪ್ರಗತಿಪರಿಶೀಲನೆ ನಡೆಸಿದ ಸಿಎಂ ಸಿದ್ದರಾಮಯ್ಯ ನಾಗನೂರು ಗ್ರಾಮವನ್ನ ಸ್ಥಳಾಂತರಕ್ಕೆ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗುರುವಾರ ಹಾವೇರಿ ಜಿಲ್ಲಾಧಿಕಾರಿ ರಘುನಂದನಮೂರ್ತಿ ಮತ್ತು ಬ್ಯಾಡಗಿ ಕ್ಷೇತ್ರದ ಶಾಸಕ ಬಸವರಾಜ್ ಶಿವಣ್ಣನವರ್ ಗ್ರಾಮದಲ್ಲಿ ಪರಿಶೀಲನೆ ನಡೆಸಿದರು.
ಸಂಪೂರ್ಣ ಗ್ರಾಮ ಸ್ಥಳಾಂತರವಾಗಿಲ್ಲ:ಗ್ರಾಮ ನೆರೆಗೆ ಈಡಾಗುವ ಮನೆಗಳಿಗೆ ತೆರಳಿ ನಿವಾಸಿಗಳ ಅಳಲು ಆಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಸ್ಥರು ತಮಗೆ ಶಾಶ್ವತ ಪರಿಹಾರ ಒದಗಿಸುವಂತೆ ಮನವಿ ಮಾಡಿದರು. ಪ್ರತಿವರ್ಷ ಮಳೆಗಾಲ ಬಂದರೆ ಕೈಯಲ್ಲಿ ಜೀವ ಹಿಡಿದು ಜೀವನ ಸಾಗಿಸಬೇಕಾಗುತ್ತದೆ. ಈಗಲಾದರೂ ಶಾಶ್ವತ ಪರಿಹಾರ ಒದಗಿಸಿ ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಬಸವರಾಜ್ ಶಿವಣ್ಣನವರ್, ಪ್ರತಿಬಾರಿ ನೆರೆ ಬಂದಾಗ ಈ ಗ್ರಾಮದ 150 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗುತ್ತೆ. ಈ ಸಮಸ್ಯೆ ಹಲವು ದಶಕಗಳಿಂದ ಗ್ರಾಮದಲ್ಲಿದೆ. ಆದರೆ, ಗ್ರಾಮಸ್ಥರು ಮಳೆಗಾಲ ಬಂದಾಗ ಸ್ಥಳಾಂತರದ ಬಗ್ಗೆ ಮಾತನಾಡುತ್ತಾರೆ. ಮತ್ತೆ ಯಥಾಸ್ಥಿತಿ ಜೀವನ ನಡೆಸುತ್ತಾರೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಗ್ರಾಮ ಸ್ಥಳಾಂತರವಾಗಿಲ್ಲ ಎಂದು ತಿಳಿಸಿದರು.