ಹಾವೇರಿ:9 ತಿಂಗಳ ಹಿಂದೆ ನಾಪತ್ತೆಯಾಗಿದ್ದ ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿ ಗ್ರಾಮದ ನಿಂಗಪ್ಪ (ಹೆಸರು ಬದಲಾಯಿಸಲಾಗಿದೆ) ಎಂಬುವವರ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ರಾಣೆಬೆನ್ನೂರು ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿ ಧಾರವಾಡ ಹೈಕೋರ್ಟ್‌ಗೆ ಹಾಜರುಪಡಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ರಾಣೆಬೆನ್ನೂರು ತಾಲೂಕಿನ ಮೆಡ್ಲೇರಿಯ ನಿಂಗಪ್ಪ ಅವರ ಪತ್ನಿ ಎರಡು ಮಕ್ಕಳೊಂದಿಗೆ 9 ತಿಂಗಳ ಹಿಂದೆ ನಾಪತ್ತೆಯಾಗಿದ್ದಳು. ತನ್ನ ಬಳಿ ಇದ್ದ ಓರ್ವ ಮಗನೊಂದಿಗೆ ನಿಂಗಪ್ಪ ಸಂಬಂಧಿಕರ ಮನೆ, ಗ್ರಾಮಗಳೆಲ್ಲ ಹುಡುಕಾಡಿದ್ದ. ಪತ್ನಿ, ಪುತ್ರರು ಸಿಗದ ಕಾರಣ ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೂ ಪತ್ತೆಯಾಗಿರಲಿಲ್ಲ. ಇದರಿಂದ ಬೇಸತ್ತ ನಿಂಗಪ್ಪ ಕೊನೆಗೆ ನ್ಯಾಯಾಲಯದ ಮೊರೆ ಹೋಗಿದ್ದಾನೆ.
ಧಾರವಾಡ ಹೈಕೋರ್ಟ್ನಲ್ಲಿ ನಿಂಗಪ್ಪ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ. ಪ್ರಕರಣ ಆಲಿಸಿದ ನ್ಯಾಯಾಧೀಶರು ಒಂದು ತಿಂಗಳ ಗಡುವು ನೀಡಿ ನಿಂಗಪ್ಪ ಅವರ ಪತ್ನಿ ಮತ್ತು ಮಕ್ಕಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶಿಸಿದ್ದರು. ನ್ಯಾಯಾಲಯದ ಆದೇಶದ ಮೇಲೆ ರಾಣೆಬೆನ್ನೂರು ಗ್ರಾಮಾಂತರ ಪೊಲೀಸರು ಅವರ ಪತ್ತೆಗೆ ಬಲೆ ಬೀಸಿದ್ದಾರೆ. ಮಂಗಳೂರು, ಗೋವಾ ಸೇರಿದಂತೆ ವಿವಿಧೆಡೆ ಹುಡುಕಾಟ ನಡೆಸಿದ್ದ ಪೊಲೀಸರು ಕೊನೆಗೆ ತಮಿಳುನಾಡಿನಲ್ಲಿ ಅವರನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ನಿಂಗಪ್ಪ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ವಶಕ್ಕೆ ಪಡೆದಿರುವ ಪೊಲೀಸರು ಧಾರವಾಡ ಹೈಕೋರ್ಟ್‌ಗೆ ಹಾಜರುಪಡಿಸಿದ್ದಾರೆ.