ಹಾವೇರಿ:ಸರ್ಕಾರಿ ಶಾಲೆಗಳೆಂದರೆ ಸಾಕು, ಮೂಲ ಸೌಲಭ್ಯಗಳ ಕೊರತೆ ಸಾಮಾನ್ಯವಾಗಿರುತ್ತದೆ. ಆದರೆ ಇದಕ್ಕೆ ವಿಭಿನ್ನ ಸಮಸ್ಯೆ ಹಾವೇರಿ ಜಿಲ್ಲೆ ರಟ್ಟಿಹಳ್ಳಿ ಪಟ್ಟಣದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯದ್ದು. ಶಾಲೆಗೆ ಸುಸಜ್ಜಿತ ಕಟ್ಟಡ, ವಿಶಾಲವಾದ ಮೈದಾನ, ಶೌಚಾಲಯ ಜತೆಗೆ ಕುಡಿಯುವ ನೀರಿನ ಘಟಕ ಸಹ ಇದೆ. ಆದರೆ ಕಳೆದ ಕೆಲ ತಿಂಗಳುಗಳಿಂದ ಈ ಶಾಲೆಗೆ ಕಿಡಿಗೇಡಿಗಳ ಕಾಟ ಶುರುವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಸರ್ಕಾರಿ ಶಾಲೆ ಆವರಣದೊಳಗೆ ಕಿಡಿಗೇಡಿಗಳ ವಿಕೃತಿ: ಸಮಸ್ಯೆ ಬಗೆ ಹರಿಸುವಂತೆ ಆಗ್ರಹ ಶಾಲೆ ಆವರಣದೊಳಗೆ ಆಗಮಿಸುವ ಕಿಡಿಗೇಡಿಗಳು ಕಂಡ ಕಂಡಲ್ಲಿ ಮಲ ಮೂತ್ರ ವಿಸರ್ಜನೆ ಮಾಡುತ್ತಿದ್ದಾರಂತೆ. ಜತೆಗೆ ಮದ್ಯಪಾನ ಮಾಡಿದ ಬಾಟಲಿ ಮತ್ತು ಧೂಮಪಾನ ಮಾಡಿದ ಸಿಗರೇಟ್ ತುಣಕುಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಾರಂತೆ.
ವಿದ್ಯಾರ್ಥಿನಿಯರು ನೆಟ್ಟ ಗಿಡಗಳನ್ನು ಕಿತ್ತು ಹಾಕಿ ವಿಕೃತಿ ಮೆರೆಯುತ್ತಿದ್ದಾರೆ. ತರಗತಿ ನಡೆಯುವ ವೇಳೆ ಮೊಬೈಲ್‌ನಲ್ಲಿ ಸೌಂಡ್ ಹಾಕಿ ಪಬ್ಜಿ ಆಡುತ್ತಾ ವಿದ್ಯಾರ್ಥಿಗಳಿಗೆ ತೊಂದರೆ ನೀಡುತ್ತಿದ್ಧಾರಂತೆ. ಶಿಕ್ಷಕಿಯರು ಈ ಕುರಿತಂತೆ ಹೇಳಲು ಬಂದರೆ ಅವರ ಜೊತೆ ಜಗಳವಾಡುತ್ತಾರಂತೆ.
ಪುಂಡರ ಕಾಟಕ್ಕೆ ಬೇಸತ್ತ ಶಾಲೆಯವರು ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದಾರೆ. ಆದರೆ, ಈ ಪುಂಡರು ಸಿಸಿಟಿವಿ ಕ್ಯಾಮರಾ ಹಾಳು ಮಾಡಿದ್ದಾರೆ. ಈ ಕುರಿತಂತೆ ಪಟ್ಟಣ ಪಂಚಾಯಿತಿ ಮತ್ತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಬಂದ ಕೆಲ ದಿನಗಳ ಕಾಲ ಕಿಡಿಗೇಡಿಗಳು ಈ ಕಡೆ ಸುಳಿದಿಲ್ಲ. ಆದರೆ, ಪೊಲೀಸರು ಹೋದ ನಂತರ ಕಿಡಿಗೇಡಿಗಳು ಮತ್ತೆ ತಮ್ಮ ವರಸೆ ಶುರುಮಾಡಿದ್ದಾರೆ.
ಶಾಲೆ ಪಟ್ಟಣದ ಜನವಸತಿ ಪ್ರದೇಶದಲ್ಲಿದೆ. ಸುತ್ತಲೂ ಕಟ್ಟಡಗಳಿದ್ದು, ರಕ್ಷಣೆ ಇದೆ. ಸಾರ್ವಜನಿಕರಿಗೆ ಮುಂಜಾನೆ ಮತ್ತು ಸಂಜೆ ವಾಯು ವಿಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಶಾಲೆಯ ಗೇಟ್‌ಗೆ ಬೀಗ ಹಾಕಿದರು ಕೆಲವು ಕಿಡಿಗೇಡಿಗಳು ಗೇಟ್ ಹತ್ತಿ ಬಂದು ವಿದ್ಯಾರ್ಥಿನಿಯರಿಗೆ ತೊಂದರೆ ನೀಡುತ್ತಿದ್ದಾರೆ. ಪೊಲೀಸ್ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆ ಹರಿಸುವಂತೆ ಶಾಲೆಯ ಶಿಕ್ಷಕಿಯರು ಮತ್ತು ವಿದ್ಯಾರ್ಥಿನಿಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಕೆಎಸ್‌ಆರ್‌ಟಿಸಿ ಬಸ್ - ಕಾರು ನಡುವೆ ಡಿಕ್ಕಿ: ದಂಪತಿ ಸ್ಥಳದಲ್ಲೇ ಸಾವು