ಹಾವೇರಿ :ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆಯ ಸಂಖ್ಯೆ ಹೆಚ್ಚಿದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ. ರೈತರ ಆತ್ಮಹತ್ಯೆಯ ನಿಖರ ಸಂಖ್ಯೆ ತಿಳಿಯಲು ಎಫ್ಎಸ್ಎಲ್ ವರದಿ ಬರುವವರೆಗೂ ಕಾಯಬೇಕು ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2020ರಲ್ಲಿ 500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2021ರಲ್ಲಿ 600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2023ರಲ್ಲೂ 500ಕ್ಕೂ ಅಧಿಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೊಲೀಸ್ ಎಫ್ಐಆರ್ನಲ್ಲಿ ರೈತ ಆತ್ಮಹತ್ಯೆ ಎಂದು ದಾಖಲಾದ ಕೂಡಲೇ ಅದನ್ನು ರೈತ ಆತ್ಮಹತ್ಯೆ ಎನ್ನುವುದು ತಪ್ಪು ಎಂದು ಹೇಳಿದರು.
ಹಾವೇರಿ ಜಿಲ್ಲೆಯಲ್ಲಿ 2021ರಲ್ಲಿ 590, 2022ರಲ್ಲಿ 651, 2023ರಲ್ಲಿ 412 ಸ್ವಾಭಾವಿಕ ಆತ್ಮಹತ್ಯೆಗಳು ವರದಿಯಾಗಿವೆ. ವಿವಿಧ ಕಾರಣಗಳಿಂದ ಆತ್ಮಹತ್ಯೆಗಳು ನಡೆಯುತ್ತವೆ. ಪ್ರೇಮ ವೈಫಲ್ಯದಿಂದ ಆತ್ಮಹತ್ಯೆಗಳಾಗಿವೆ. ಅವುಗಳೆನ್ನೆಲ್ಲ ರೈತ ಆತ್ಮಹತ್ಯೆಗಳು ಎಂದರೆ ಹೇಗೆ ?. ರೈತ ಆತ್ಮಹತ್ಯೆಗಳ ಸಂಖ್ಯೆಯನ್ನು ಎಫ್ಎಸ್ಎಲ್ ರಿಪೋರ್ಟ್ ಆಧರಿಸಿ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಎಫ್ಎಸ್ಎಲ್ ವರದಿ ಬಂದ ಬಳಿಕ ಆತ್ಮಹತ್ಯೆ ಎಂದು ಬರೆಯುವುದು ಸೂಕ್ತ. ಜನರಲ್ಲಿ ಆತಂಕ ಮೂಡಿಸುವ ರೀತಿಯಲ್ಲಿ ಆತ್ಮಹತ್ಯೆಗಳ ವರದಿ ಮಾಡುವುದು ಸರಿಯಲ್ಲ. ಬೇರೆ ಬೇರೆ ಕಾರಣಗಳಿಂದ ಆತ್ಮಹತ್ಯೆ ಮಾಡಿದರೂ ಪರಿಹಾರ ಸಿಗುತ್ತದೆ ಎಂಬ ದುರಾಸೆಯಿಂದ ರೈತ ಆತ್ಮಹತ್ಯೆ ಎಂದು ದಾಖಲು ಮಾಡಿರಬಹುದು. ಹಾಗಾಗಿ ಎಫ್ಎಸ್ಎಲ್ ವರದಿ ಬರುವ ಮುಂಚೆಯೇ ರೈತ ಆತ್ಮಹತ್ಯೆ ಎನ್ನುವುದು ತಪ್ಪಾಗುತ್ತದೆ ಎಂದರು.