ಸಚಿವ ಶಿವಾನಂದ ಪಾಟೀಲ್ ಅವರು ಮಾತನಾಡಿದರು ಹಾವೇರಿ :ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಮತ್ತು ಹಾವೇರಿ ಜಿಲ್ಲೆಯ ರೈತರ ನಡುವಿನ ಜಟಾಪಟಿಗೆ ತೆರೆಬಿದ್ದಿದೆ. ಸೋಮವಾರ ನಡೆದ ರೈತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು, ನಾನು ಐದು ಲಕ್ಷ ರೂಪಾಯಿ ಪರಿಹಾರ ನೀಡಲು ಆರಂಭಿಸಿದ ನಂತರ ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ ಎಂದು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು. ಈ ರೀತಿ ಹೇಳಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಜೊತೆಗೆ ಯಾರದಾದರೂ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ನಾನು ಈ ರೀತಿ ಹೇಳಿಕೆ ನೀಡಿಲ್ಲ. ಬದಲಿಗೆ ನಾನು ನೀಡಿರುವ ಹೇಳಿಕೆಯನ್ನು ಮಾಧ್ಯಮದವರು ತಿರುಚಿದ್ದಾರೆ. ಕೆಲ ಮಾಧ್ಯಮಗಳ ಪ್ರತಿನಿಧಿಗಳು ಈ ರೀತಿ ಮಾಡಿದ್ದು. ತನಿಖೆ ನಂತರ ಘಟನೆಯ ಸತ್ಯಾಸತ್ಯತೆ ಹೊರಬರಲಿದೆ ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.
ಸಚಿವ ಶಿವಾನಂದ ಪಾಟೀಲ್ ಕಳೆದ ಕೆಲ ದಿನಗಳ ಹಿಂದೆ ರೈತರ ಆತ್ಮಹತ್ಯೆ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ''ಆತ್ಮಹತ್ಯೆ ಪರಿಹಾರಧನ ಅಧಿಕ ಮಾಡಿದಾಗಿನಿಂದ ಆತ್ಮಹತ್ಯೆ ಪ್ರಕರಣಗಳು ಅಧಿಕವಾಗಿವೆ. ಯಾವ ಯಾವ ಕಾರಣಕ್ಕೆ ಆತ್ಮಹತ್ಯೆಯಾದರೆ ಅವುಗಳನ್ನು ಸಹ ರೈತ ಆತ್ಮಹತ್ಯೆ ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ ಪತ್ರಕರ್ತರು ಕೇವಲ ಎಫ್ಐಆರ್ ಮೇಲೆ ರೈತ ಆತ್ಮಹತ್ಯೆ ಪ್ರಕರಣದ ಅಂಕಿ ಸಂಖ್ಯೆ ನೀಡುತ್ತಾರೆ'' ಎಂದು ಸಚಿವ ಪಾಟೀಲ್ ತಿಳಿಸಿದ್ದರು ಎಂದು ವರದಿಯಾಗಿತ್ತು.
ಅಲ್ಲದೆ ರೈತರ ಆತ್ಮಹತ್ಯೆ ಬಗ್ಗೆ ಎಫ್ಎಸ್ಎಲ್ ವರದಿ ಬರುವವರೆಗೆ ಕಾದು ನಂತರ ಅಂಕಿಸಂಖ್ಯೆ ನೀಡುವಂತೆ ತಿಳಿಸಿದ್ದರು. ಇದರಿಂದ ಆಕ್ರೋಶಗೊಂಡ ರೈತರು, ಸಚಿವ ಶಿವಾನಂದ ಪಾಟೀಲ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ ಶಿವಾನಂದ ಪಾಟೀಲ್ ಕ್ಷಮೆಯಾಚಿಸಬೇಕು, ಇಲ್ಲದಿದ್ದರೇ ಅವರ ಕಾರ್ಯಕ್ರಮಗಳಿಗೆ ಘೇರಾವ್ ಹಾಕುವ ಎಚ್ಚರಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಸಚಿವ ಶಿವಾನಂದ ಪಾಟೀಲ್ ಜನತಾ ದರ್ಶನ ಕಾರ್ಯಕ್ರಮಕ್ಕೆ ಘೇರಾವ್ ಹಾಕಲು ರೈತರು ಸಿದ್ಧತೆ ನಡೆಸಿದ್ದರು. ಅಲ್ಲದೆ ಈ ಕುರಿತಂತೆ ಸಚಿವರು ಕ್ಷಮೆಯಾಚಿಸಬೇಕು, ಇಲ್ಲದಿದ್ದರೆ ಘೇರಾವು ಹಾಕುವುದು ಶತಸಿದ್ದ ಎಂದು ಪಟ್ಟು ಹಿಡಿದಿದ್ದರು. ಪ್ರವಾಸಿಮಂದಿರದಲ್ಲಿ ಸಾವಿರಾರು ರೈತರು ಜಮಾವಣೆಗೊಂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರ ಸಂಖ್ಯೆ ಸಹ ಅಧಿಕವಾಗಿತ್ತು. ಈ ಮಧ್ಯೆ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಸಚಿವ ಶಿವಾನಂದ ಪಾಟೀಲ್ ಅಧಿಕಾರಿಗಳನ್ನು ಕಳುಹಿಸಿ ಸಂಧಾನಕ್ಕೆ ಮುಂದಾದರು.
ಪ್ರತಿಭಟನೆಗೆ ಕುಳಿತ ರೈತರ ಬಳಿ ತೆರಳಿ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಹಸಿರುಸೇನೆ ಮತ್ತು ರೈತ ಸಂಘದ ಜಿಲ್ಲಾಧ್ಯಕ್ಷ ಸಚಿವರ ಕ್ಷಮೆಯಾಚನೆಗೆ ಒತ್ತಾಯಿಸಿದರು. ರೈತರ ಜೊತೆ ಮೈಕ್ ಪಡೆದು ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ನಾನು ರೈತರ ಪರವಾಗಿ ಇದ್ದೇನೆ. ರೈತರ ಆತ್ಮಹತ್ಯೆ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ಆದರೂ ಸಹ ವಿಷಾದ ವ್ಯಕ್ತಪಡಿಸಿದ್ದೇನೆ. ಕೆಲ ಮಾಧ್ಯಮಗಳು ನನ್ನ ಹೇಳಿಕೆಯನ್ನ ತಿರುಚಿವೆ. ಹೀಗಾಗಿ ರೈತರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆಯಾಚಿಸುವುದಾಗಿ ತಿಳಿಸಿದರು. ಸಚಿವರು ರೈತರ ಕ್ಷಮೆಯಾಚನೆಯ ನಂತರ ಚಪ್ಪಾಳೆ ತಟ್ಟುವ ಮೂಲಕ ಸಚಿವರಿಗೆ ಧನ್ಯವಾದ ಅರ್ಪಿಸಿದರು.
ಇದಕ್ಕೂ ಮೊದಲು ರೈತರು ಸಾವಿರಾರು ರೂಪಾಯಿ ಹಣವನ್ನು ಕೈಯಲ್ಲಿ ಹಿಡಿದು ಸಚಿವ ಶಿವಾನಂದ ಪಾಟೀಲ್‌ಗೆ ಪರಿಹಾರ ನೀಡಲು ಸಿದ್ಧತೆ ನಡೆಸಿದ್ದರು. ಸಚಿವ ಶಿವಾನಂದ ಪಾಟೀಲ್ ಕ್ಷಮೆಯಾಚಿಸುತ್ತಿದ್ದಂತೆ ಪ್ರಕರಣ ಸುಖಾಂತ್ಯಗೊಂಡಂತಾಗಿದೆ.
ಈ ಸಂದರ್ಭದಲ್ಲಿ ಹಾವೇರಿ ಡಿ ಸಿ ರಘುನಂದನಮೂರ್ತಿ, ಎಸ್ಪಿ ಶಿವಕುಮಾರ್ ಗುಣಾರೆ ಸೇರಿದಂತೆ ವಿವಿಧ ಅಧಿಕಾರಿಗಳು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು. ದೇಶದಲ್ಲಿ ಕಡ್ಡಿಪೆಟ್ಟಿಗೆ ಮೇಲೆ ಸಹ ಅದರ ಬೆಲೆ ನಿಗಧಿ ಮಾಡಿ ಹಾಕಿರಲಾಗುತ್ತದೆ. ಆದರೆ ದುರ್ದೈವ ರೈತರು ಬೆಳೆದ ಬೆಳೆಗಳಿಗೆ ಯಾವುದೇ ಬೆಲೆ ನಿಗದಿ ಮಾಡಿರುವುದಿಲ್ಲ ಎಂದು ಪಾಟೀಲ್ ಬೇಸರ ವ್ಯಕ್ತಪಡಿಸಿದರು.
ಇದನ್ನ ಸರ್ಕಾರಗಳು ಮಾಡಿದರೆ ರೈತರು ಯಾವುದೇ ಸರ್ಕಾರದ ಮುಂದೆ ಕೈಯೊಡ್ಡುವ ಪರಿಸ್ಥಿತಿ ಬರುವುದಿಲ್ಲ ಎಂದರು. ಕಳೆದ ಕೆಲ ದಿನಗಳ ಹಿಂದೆ ಟೊಮೆಟೊಗೆ ಎಲ್ಲಿಲ್ಲದ ಬೆಲೆ ಬಂತು. ಅದನ್ನ ನೋಡಿ ನಾನು ದ್ರಾಕ್ಷಿ ಬಿಟ್ಟು ಟೊಮೆಟೊ ಬೆಳೆದಿದ್ದರೆ ಚೆನ್ನಾಗಿರುತ್ತಿತ್ತಲ್ಲ ಎನ್ನಿಸಿತು. ಈರುಳ್ಳಿ ರಫ್ತು ಶುಂಕವನ್ನ ಬಿಜೆಪಿ ಸರ್ಕಾರ ಏರಿಕೆ ಮಾಡಿತು. ಪೆಟ್ರೋಲ್, ಡೀಸೆಲ್ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಆದರೆ ಅದನ್ನ ಯಾರು ಪ್ರಶ್ನೆ ಮಾಡುತ್ತಿಲ್ಲ ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದರು. ಇವತ್ತು ಕಬ್ಬಿಗೆ ಅತ್ಯುತ್ತಮ ಬೆಲೆ ಇದೆ. ಆದರೆ, ಸಕ್ಕರೆ ರಫ್ತು ಮಾಡುವುದನ್ನ ಬ್ಯಾನ್ ಮಾಡುತ್ತಿದ್ದಾರೆ ಎಂದು ಪಾಟೀಲ್ ಆರೋಪಿಸಿದರು.
ಸರ್ಕಾರಗಳು ಈ ರೀತಿ ತಪ್ಪುಮಾಡುವುದರಿಂದ ಎರಡು ವರ್ಷ ಮೂರು ವರ್ಷಕ್ಕೊಮ್ಮೆ ಉತ್ತಮ ಬೆಲೆ ಇದ್ದಾಗ ಸಹ ರೈತನಿಗೆ ದರ ಸಿಗುವುದಿಲ್ಲ. ಪರಿಣಾಮ ಆತ ನೊಂದುಕೊಳ್ಳುತ್ತಾನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಿಕೊಂಡು ಯೋಗ್ಯ ದರ ನಿಗದಿ ಮಾಡಿದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತೆ ಎಂದು ಸಚಿವ ಶಿವಾನಂದ ತಿಳಿಸಿದರು. ಕೆಲ ಸಕ್ಕರೆ ಕಾರ್ಖಾನೆ ಮಾಲೀಕರು ರೈತರ ಕಬ್ಬಿನ ಇಳುವರಿಯಲ್ಲಿ ಸಾಗಾಣಿಕೆಯಲ್ಲಿ ಮತ್ತು ತೂಕದಲ್ಲಿ ರೈತರಿಗೆ ಮೋಸ ಮಾಡುತ್ತಾರೆ. ಇದನ್ನ ರೈತರು ಪ್ರಶ್ನಿಸುವುದಿಲ್ಲ ಎಂದು ಸಚಿವ ಪಾಟೀಲ್ ತಿಳಿಸಿದರು.
ಇದನ್ನೂ ಓದಿ :ರೈತರಿಗೆ ಅನ್ಯಾಯವಾಗಿದ್ದರೆ ಪರಿಹಾರ ವಿಳಂಬ ಮಾಡುವುದಿಲ್ಲ: ಸಚಿವ ಶಿವಾನಂದ ಪಾಟೀಲ್