ಹಾವೇರಿ: "ಕಾಂಗ್ರೆಸ್ಸಿನ 25 ಶಾಸಕರ ವಿಷಯ ಹಾಗಿರಲಿ, ವಿಜಯಪುರ ಜಿಲ್ಲೆಯ 6 ಕಾಂಗ್ರೆಸ್ ಶಾಸಕರಲ್ಲಿ ಒಬ್ಬರಾದರೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಂಪರ್ಕದಲ್ಲಿದ್ದಾರಾ" ಎಂದು ಸಚಿವ ಶಿವಾನಂದ ಪಾಟೀಲ್ ಪ್ರಶ್ನಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿ, "ಕಾಂಗ್ರೆಸ್‌ನ 25 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂಬ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ, ಬಸನಗೌಡ ಪಾಟೀಲ್ ಯತ್ನಾಳ್ ಹೇಗೆ ಬೇಕಾದರೂ ಹೇಳಲಿ, ಅದು ನಮಗೆ ಸಂಬಂಧವಿಲ್ಲ" ಎಂದರು.
ತಮಿಳುನಾಡು ಸರ್ಕಾರ ಕಾವೇರಿ ನೀರು ಸಂಬಂಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಬಗ್ಗೆ ಮಾತನಾಡಿ, "ತಮಿಳುನಾಡು ಸರ್ಕಾರ ಪ್ರತಿವರ್ಷ ನ್ಯಾಯಾಲಯದ ಮೊರೆ ಹೋಗುತ್ತದೆ. ರಾಜ್ಯದಲ್ಲಿ ಮಳೆ ಸರಿಯಾಗಿ ಆಗದೇ ನೀರು ಬಿಡುವುದು ಹೇಗೆ?. ರಾಜ್ಯದಲ್ಲಿ ಬರಗಾಲ ಎಂದು ಘೋಷಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಸಿಎಂ ಮಾಡಿರುವ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸುವ ನಿರೀಕ್ಷೆ ಇದೆ" ಎಂದು ಹೇಳಿದರು.
ಇದೇ ವೇಳೆ, "ರಾಜ್ಯದಲ್ಲಿ ಬೀಜ ಬಿತ್ತನೆ ಚೆನ್ನಾಗಿ ಆಗಿದೆ. ಇನ್ನೊಂದು ವಾರ ಅಥವಾ ಎರಡು ವಾರದಲ್ಲಿ ಮಳೆಯಾಗುವ ನಿರೀಕ್ಷೆ ಇದೆ. ಒಂದು ವೇಳೆ ಮಳೆಯಾಗದೆ ಪರಿಸ್ಥಿತಿ ಹದಗೆಟ್ಟರೆ ಸಿಎಂ ಗಮನಕ್ಕೆ ತಂದು ರಾಜ್ಯದಲ್ಲಿ ಬರಗಾಲ ಘೋಷಣೆ ಮಾಡುವ ಬಗ್ಗೆ ಚರ್ಚೆ ನಡೆಸಲಾಗುವುದು" ಎಂದು ತಿಳಿಸಿದರು.