ರಾಣೆಬೆನ್ನೂರು: ಜನರು ಹಾಗೂ ರೈತರ ಜೊತೆಯಲ್ಲಿ ಬೆರೆಯಲು ಕೃಷಿ ಖಾತೆಯನ್ನು ಆಯ್ಕೆ ಮಾಡಿಕೊಂಡೆ ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿದರು.
ನೂತನ ಸಚಿವರಾಗಿ ರಾಣೆಬೆನ್ನೂರು ನಗರಕ್ಕೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯ ಖಾತೆ ತಗೆದುಕೊಂಡಿದ್ದರೆ ಜನರ ಸಂಪರ್ಕ ದೂರವಾಗುತಿತ್ತು. ಈ ಕಾರಣದಿಂದ ಯಡಿಯೂರಪ್ಪ ಹತ್ತಿರ ಕೇಳಿಕೊಂಡು ಕೃಷಿ ಖಾತೆಯನ್ನು ಪಡೆದಕೊಂಡೆ. ಕೃಷಿ ಖಾತೆ ದೊಡ್ಡ ಖಾತೆಯಾಗಿದ್ದು, ರೈತರ ಸೇವೆಯನ್ನು ಮಾಡುವ ಭಾಗ್ಯ ದೊರೆತಿದೆ ಎಂದರು.
ಕೃಷಿ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ ಇವುಗಳನ್ನು ಬಗೆ ಹರಿಸುವ ಕೆಲಸ ಮಾಡುತ್ತೇನೆ. ನಾನೊಬ್ಬ ರೈತನ ಮಗನಾದ ಕಾರಣ ಕೃಷಿ ಖಾತೆಯಿಂದ ರಾಜ್ಯಾದ್ಯಂತ ಸಂಚರಿಸಿ, ರೈತರ ಕಣ್ಣಿರು ಒರೆಸುವ ಕೆಲಸ ಮಾಡಲಿಕ್ಕೆ ಅವಕಾಶ ಸಿಕ್ಕಿದೆ ಎಂದು ಹೇಳಿದರು.
ರೈತರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಯಡಿಯೂರಪ್ಪ ಅವರು ಈ ಬಾರಿ ಬಜೆಟ್ ನಲ್ಲಿ ಉತ್ತಮ ಅವಕಾಶ ನೀಡಲಿದ್ದಾರೆ. ಈಗಾಗಲೇ ಬಜೆಟ್ ಪೂರ್ವ ಸಭೆಯಲ್ಲಿ ಅನೇಕ ಸಲಹೆಗಳನ್ನು ರೈತರು ನೀಡಿದ್ದಾರೆ. ರೈತರ ಸಲಹೆ ಮೇರೆಗೆ ಕೃಷಿ ಇಲಾಖೆಗೆ ಏನು ನೀಡಬೇಕು ಎಂಬುದನ್ನು ಅಧಿಕಾರಿಗಳು ಹತ್ತಿರ ಚರ್ಚೆ ಮಾಡುತ್ತೆನೆ ಎಂದು ತಿಳಿಸಿದರು.