ಹಾವೇರಿ:ಜಿಲ್ಲೆಯ ಹಿರೇಕೇರೂರು ಕ್ಷೇತ್ರದಲ್ಲಿ ಇಂದು 461 ಕೋಟಿ ರೂ. ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇವೆ. ಜತೆಗೆ 38 ಕೋಟಿ ರೂ. ಮಡ್ಲೂರು ಏತ ನೀರಾವರಿ ಯೋಜನೆ ಲೋಕಾರ್ಪಣೆ ಮಾಡಲಾಗುತ್ತದೆ. ಮುಖ್ಯಮಂತ್ರಿ ಬಸವರಾ ಬೊಮ್ಮಾಯಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಸಚಿವ ಬಿ.ಸಿ ಪಾಟೀಲ್ ಹೇಳಿದರು. ಹಿರೇಕೇರೂರಿನಲ್ಲಿ ಸುದ್ದಿಗಾರರೊಂದಗೆ ಮಾತನಾಡಿದ ಅವರು, 2018ರಲ್ಲಿ ಚುನಾಯಿತರಾಗಿ ನಾನು ಹಿರೇಕೇರೂರು ತಾಲೂಕಿಗೆ 1000 ಕೋಟಿಗೂ ಹೆಚ್ಚು ಅನುದಾನ ತಂದಿದ್ದೇನೆ. ತಾಲೂಕಿಗೆ 6 ನೀರಾವರಿ ಯೋಜನೆ ತಂದಿರುವೆ. ತಾಲೂಕಿನಲ್ಲಿ ಎಲ್ಲಾ ಕೆರೆಗಳು ಮಳೆಗಾಲದಲ್ಲಿ ತುಂಬುತ್ತವೆ. ಹಾಗಾಗಿ ನಮ್ಮ ತಾಲೂಕಿಗೆ ಬರಗಾಲ ಬರಲ್ಲ ಎಂಬ ತೃಪ್ತಿ ನನಗೆ ಇದೆ ಎಂದರು.
ಮನೆ ಮನೆಗೆ ಕಿರು ಹೊತ್ತಿಗೆ: ಮಹಿಳೆಯರಿಗೆ ಗಾರ್ಮೆಂಟ್ಸ್ ಮಾಡುತ್ತೇವೆ ಎಂದು ಹೇಳಿದ್ದೆವು. ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ನಾನು ಕ್ಷೇತ್ರಕ್ಕಾಗಿ ಏನು ಮಾಡಿರುವೆ ಅನ್ನೋದನ್ನು ಕಿರು ಹೊತ್ತಿಗೆ ಬಿಡುಗಡೆ ಮಾಡುವ ಮೂಲಕ ಹೇಳುವೆ. ಏನೆಲ್ಲಾ ಕೆಲಸ ಆಗಿದೆ ಅಂತಾ ಮನೆ ಮನೆಗೆ ಕಿರು ಹೊತ್ತಿಗೆಯನ್ನು ಕಳಿಸಿಕೊಡಲಾಗುವುದು. ನನ್ನ ಸಾಧನೆಯ ವರದಿಯನ್ನು ಜನತೆಗೆ ಈ ಮೂಲಕ ಒಪ್ಪಿಸುವೆ ಎಂದು ತಿಳಿಸಿದರು.
ದಮ್, ತಾಖತ್ ಮೇಲೆ ಚುನಾವಣೆ ನಡೆಯಲ್ಲ:ಮಾಜಿ ಶಾಸಕ ಯು.ಬಿ ಬಣಕಾರ್ ದಮ್ ಮತ್ತು ತಾಖತ್ ಬಗ್ಗೆ ಮಾತಾಡಿದ್ದಾರೆ. ಅವರ ದಮ್ ಮತ್ತು ತಾಖತ್ ಅನ್ನು ನಾನು ಈಗಾಗಲೇ ಮೂರು ಬಾರಿ ನೋಡಿ ಆಗಿದೆ. ನನಗೆ ದಮ್ ಇರೋದಕ್ಕೆ ಇವರಿಗೆ ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ, ಒಂದು ಕಾರು, ರಾಜ್ಯ ಸಚಿವ ದರ್ಜೆ ಸ್ಥಾನಮಾನ ಬಂದಿತ್ತು. ದಮ್ ಮತ್ತು ತಾಖತ್ ಮೇಲೆ ಚುನಾವಣೆ ನಡೆಯಲ್ಲ. ಅಭಿವೃದ್ಧಿ ಮೇಲೆ ಚುನಾವಣೆ ನಡೆಯುತ್ತದೆ. ಅವರು ಏನು ಕೆಲಸ ಮಾಡಿದ್ದಾರೆ ಅಂತಾ ಪುಸ್ತಕ ಬಿಡುಗಡೆ ಮಾಡಲಿ. ಆವಾಗ ನಾನು ಒಪ್ಪಿಕೊಳ್ಳುವೆ ಎಂದು ಬಿ ಸಿ ಪಾಟೀಲ್ ಸವಾಲು ಹಾಕಿದರು.