ಹಾವೇರಿ:ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ 'ಮಹಾ ನಾಟಕ' ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹನುಮನಮಟ್ಟಿಯಲ್ಲಿ ಮಾತನಾಡಿದ ಅವರು, ಇದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದರು.
ಡಿ.ಕೆ.ಶಿ ಸಚಿವರಾಗಿದ್ದಾಗ ಮೇಕೆದಾಟು ಬಗ್ಗೆ ಚಕಾರವೆತ್ತಿಲ್ಲ:
2013 ರಿಂದ 2018 ರವರೆಗೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿತ್ತು. ಆ ಸಮಯದಲ್ಲಿ ಮೇಕೆದಾಟು ಬಗ್ಗೆ ಸುದ್ದಿಯೇ ಇಲ್ಲ, ಡಿಪಿಆರ್ ಸಲ್ಲಿಸಿಲ್ಲ. ಜತೆಗೆ ಪಾದಯಾತ್ರೆ ಆರಂಭಿಸಿರುವ ಡಿ.ಕೆ.ಶಿವಕುಮಾರ್ 2018-19 ರಲ್ಲಿ ನೀರಾವರಿ ಸಚಿವರಾಗಿದ್ದಾಗ ಸಹ ಮೇಕೆದಾಟು ಬಗ್ಗೆ ಚಕಾರವೆತ್ತಿಲ್ಲ.
ಈಗ ಚುನಾವಣೆಗಳು ಬರುತ್ತಿದ್ದು, ಜನರ ಗಮನ ಸೆಳೆಯಲು ಮತ್ತು ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಮುಂದೆ ತಾನು ಜನಾನುರಾಗಿ, ತಮಗೆ ದೊಡ್ಡ ಜನಪ್ರಿಯತೆ ಇದೆ ಎಂದು ತೋರಿಸಿಕೊಳ್ಳಲು ಇದೊಂದು ನಾಟಕವಾಡುತ್ತಿದ್ದಾರೆ ಎಂದು ಬಿ.ಸಿ.ಪಾಟೀಲ್ ಆರೋಪಿಸಿದರು.
ಕೋವಿಡ್ನಂತಹ ಪರಿಸ್ಥಿತಿಯಲ್ಲಿ ಜನ ಸೇರಿಸಿ ದೊಡ್ಡ ನಾಟಕ ಮಾಡಲು ಹೊರಟಿದ್ದಾರೆ. ಈ ಸಮಯದಲ್ಲಿ ಜನರ ಆರೋಗ್ಯ ಬಹಳ ಮುಖ್ಯ. ಜನ ಹಾಳಾದರೆ ಹಾಳಾಗ್ಲಿ, ಸತ್ತರೆ ಸಾಯಲಿ ಅಂತಾ ಜನಪ್ರಿಯತೆಗಾಗಿ ಪಾದಯಾತ್ರೆ ಮಾಡುತ್ತಿರುವುದು ಮೂರ್ಖತನದ ಪರಮಾವಧಿ ಎಂದು ವಾಗ್ದಾಳಿ ನಡೆಸಿದರು.